ರಸ್ತೆ ದುರಸ್ತಿ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

| Published : Feb 16 2025, 01:46 AM IST

ಸಾರಾಂಶ

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಒಳಚರಂಡಿ ಕಾಮಗಾರಿಯು ಸಾಯಿಬಾಬ ವೃತ್ತದ ಮುಖ್ಯರಸ್ತೆಯಲ್ಲಿ ಕಳೆದ 6 ತಿಂಗಳಿಂದ ನಡೆದಿದ್ದು, ಒಳಚರಂಡಿ ಕಾಮಗಾರಿಯು ಮುಗಿದಿದೆ. 4- 5 ತಿಂಗಳಿಂದ ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ. ಮುಖ್ಯರಸ್ತೆಯು ತುಂಬಾ ಹಳ್ಳ, ಗುಂಡಿಗಳು ಬಿದ್ದಿದ್ದು ಧೂಳಿನಿಂದ ಕೂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಮಕೃಷ್ಣನಗರದ 58ನೇ ವಾರ್ಡ್‌ನಲ್ಲಿ ಸಾಯಿಬಾಬ ವೃತ್ತದ ಹತ್ತಿರ ರಸ್ತೆ ದುರಸ್ತಿ ಮತ್ತು ಕಾಮಗಾರಿ ವಿಳಂಬ ಖಂಡಿಸಿ ಸ್ಥಳೀಯರು ಮತ್ತು ಶಾಲಾ ಮಕ್ಕಳು ಶನಿವಾರ ರಸ್ತೆಗಿಳಿದು ಪ್ರತಿಭಟಿಸಿದರು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಒಳಚರಂಡಿ ಕಾಮಗಾರಿಯು ಸಾಯಿಬಾಬ ವೃತ್ತದ ಮುಖ್ಯರಸ್ತೆಯಲ್ಲಿ ಕಳೆದ 6 ತಿಂಗಳಿಂದ ನಡೆದಿದ್ದು, ಒಳಚರಂಡಿ ಕಾಮಗಾರಿಯು ಮುಗಿದಿದೆ. 4- 5 ತಿಂಗಳಿಂದ ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ. ಮುಖ್ಯರಸ್ತೆಯು ತುಂಬಾ ಹಳ್ಳ, ಗುಂಡಿಗಳು ಬಿದ್ದಿದ್ದು ಧೂಳಿನಿಂದ ಕೂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ರಸ್ತೆಯ ಅಕ್ಕ ಪಕ್ಕದಲ್ಲಿ ನೃಪತುಂಗ ಕನ್ನಡ ಶಾಲೆ, ವಿಶ್ವಮಾನವ ಶಾಲೆ, ರಾಮಕೃಷ್ಣವಿದ್ಯಾಕೇಂದ್ರ, ಸುಯೋಗ್ ಆಸ್ಪತ್ರೆ, ಬಾಲಕಿಯರ ವಸತಿ ಗೃಹ ಹಾಗೂ ದೇವಸ್ಥಾನವಿದ್ದು, ಇಲ್ಲಿ ದಿನನಿತ್ಯ ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಜನರು ಓಡಾಡುವಾಗ ಧೂಳಿನಿಂದ ಉಸಿರುಗಟ್ಟಿ ಕಾಯಿಲೆಗಳು ಬೀಳುವ ಪರಿಸ್ಥಿತಿ ಇದೆ. ಹಿರಿಯ ನಾಗರಿಕರು ಅಲ್ಲಿನ ಪಾರ್ಕಿನಲ್ಲಿ ಓಡಾಡಲು ಕೂಡ ತುಂಬಾ ತೊಂದರೆಯಾಗಿದೆ. ಇದರ ಬಗ್ಗೆ ಅನೇಕ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.

ಈ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪಾಲಿಕೆ ಅಧಿಕಾರಿಗಳು, ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.

ಅಪಾಯ ಸ್ಥಿತಿಯಲ್ಲಿರುವ ಮರದ ಕೊಂಬೆಗಳನ್ನು ಕಡಿಯಲು ಮನವಿ

ನಗರದ ಬನ್ನಿಮಂಟಪ ಸಿ ಲೇಔಟ್ 7ನೇ ಕ್ರಾಸ್ ಅಮಯ ಬೇಕ್ ಪ್ಯಾಲೇಸ್ ಎದುರು ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ತುಂಬಾ ವಯಸ್ಸಾದ ಮರಗಳಿದ್ದು, ಇದರ ಕೊಂಬೆಗಳು ಯಾವುದೇ ಸಮಯದಲ್ಲಿ ಮುರಿದು ಬಿದ್ದು ಅಪಾಯ ಸಂಭವಿಸಬಹುದಾಗಿರುತ್ತದೆ. ಈ ಪ್ರದೇಶದಲ್ಲಿ ಪ್ರತಿನಿತ್ಯ ನಾಗರೀಕರು, ವಿದ್ಯಾರ್ಥಿಗಳು, ಶಾಲಾ ವಾಹನಗಳು ಸಂಚರಿಸುತ್ತಿರುತ್ತವೆ. ಹೀಗಾಗಿ, ನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಸ್ಥಳ ಪರಿಶೀಲನೆ ಮಾಡಿ, ಆದಷ್ಟು ಬೇಗ ಅಪಾಯ ಸ್ಥಿತಿಯಲ್ಲಿರುವ ಮರದ ಕೊಂಬೆಗಳನ್ನು ಕಡಿದು ಹಾಕಬೇಕು.

- ಎಸ್.ಕೆ. ಮುದಸಿರ್ ಪಾಷ, ಸೈಯದ್ ಮಸೂದ್ ರಜ್ವಿ, ಮಿರ್ಜಾ ಜಂಷೀದ್ ಬೇಗ್, ಮೈಸೂರು