ರೇಣುಕಾಸ್ವಾಮಿ ಹತ್ಯೆ: ದರ್ಶನ್‌ ಬ್ಯಾನ್‌ಗೆ ಆಗ್ರಹಿಸಿ ಪ್ರತಿಭಟನೆ

| Published : Jun 14 2024, 01:09 AM IST

ರೇಣುಕಾಸ್ವಾಮಿ ಹತ್ಯೆ: ದರ್ಶನ್‌ ಬ್ಯಾನ್‌ಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅವರನ್ನು ಕನ್ನಡ ಚಲನಚಿತ್ರರಂಗದಿಂದಲೇ ನಿಷೇಧಿಸಬೇಕೆಂದು ಆಗ್ರಹಿಸಿ ಮಂಡ್ಯ, ದಾವಣಗೆರೆ ಹಾಗೂ ಚನ್ನಪಟ್ಟಣದಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

- ಮಂಡ್ಯದಲ್ಲಿ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆಕನ್ನಡಪ್ರಭ ವಾರ್ತೆ ಮಂಡ್ಯ/ದಾವಣಗೆರೆ/ಚನ್ನಪಟ್ಟಣ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅವರನ್ನು ಕನ್ನಡ ಚಲನಚಿತ್ರರಂಗದಿಂದಲೇ ನಿಷೇಧಿಸಬೇಕೆಂದು ಆಗ್ರಹಿಸಿ ಮಂಡ್ಯ, ದಾವಣಗೆರೆ ಹಾಗೂ ಚನ್ನಪಟ್ಟಣದಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಂಡ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಚಿತ್ರನಟ ದರ್ಶನ್, ಪವಿತ್ರ ಗೌಡ ಹಾಗೂ ಸಹಚರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.

ಚಲನಚಿತ್ರದಲ್ಲಿ ಆದರ್ಶ ನಾಯಕನಂತೆ ನಟಿಸಿ ನಿಜ ಜೀವನದಲ್ಲಿ ಖಳನಾಯಕನಂತೆ ವರ್ತಿಸಿ ಅಮಾಯಕ ಯುವಕ ರೇಣುಕಾ ಸ್ವಾಮಿಯನ್ನು ಹತ್ಯೆಮಾಡಿರುವ ಚಿತ್ರನಟ ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದರು.

ದಾವಣಗೆರೆಯಲ್ಲಿ ಜಿಲ್ಲಾ ವೀರಶೈವ ಸಮಾಜದಿಂದ ನಗರದ ಮಹಾನಗರ ಪಾಲಿಕೆ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಿ ನಡೆಸಿ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಲಾಯಿತು. ರೇಣುಕಾಸ್ವಾಮಿ ಹತ್ಯೆ ಮಾಡಿರುವ ಎಲ್ಲಾ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು. ಸಮಾಜದಲ್ಲಿ ಇನ್ನು ಮುಂದೆ ಈ ರೀತಿಯ ಕೃತ್ಯ ನಡೆಯದಂತೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನು ಚನ್ನಪಟ್ಟಣಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನಟ ದರ್ಶನ್ ಮತ್ತು ಸಹಚರರು ಅಭಿಮಾನಿಯ ಮರ್ಮಾಂಗಕ್ಕೆ ಹಲ್ಲೆ ಮಾಡಿ ವಿಕೃತವಾಗಿ ಕೊಲೆ ಮಾಡಿರುವ ಪ್ರಕರಣ ಖಂಡನೀಯ. ಅಭಿಮಾನಿಗಳ ಮೇಲೆ ವಿಕೃತಿ ಮೆರೆಯುವುದು ಸಿನಿಮಾರಂಗಕ್ಕೆ ಕಳಂಕ. ಇಂಥವರನ್ನು ಕನ್ನಡ ಚಿತ್ರರಂಗದಿಂದಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.