ಸಾರಾಂಶ
ರಾಮನಗರ: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ಹಾಕಲಾಗಿದ್ದ ಹನುಮಧ್ವಜ ತೆರವು ಮಾಡಿದ ಕ್ರಮ ಖಂಡಿಸಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಾ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಒಂದು ಕೋಮಿನ ಒಲೈಕೆಗಾಗಿ ಹನುಮಧ್ವಜವನ್ನು ಕೆಳಗೆ ಇಳಿಸಿದೆ ಎಂದು ಪ್ರತಿಭಟನಾನಿತರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಗೌತಮ್ ಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೂ ಬಡವರ ಹಾಗೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದರ ಪರಿಣಾಮವನ್ನು ಮಂಡ್ಯ ಜಿಲ್ಲೆಯ ಕೆರೆಗೂಡು ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಅದರಲ್ಲೂ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡಿಕೊಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಘಟನಾ ಸ್ಥಳಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕ ನಾಯಕರು ಭೇಟಿ ನೀಡಿದ್ದರು. ಈ ವೇಳೆ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಅವರನ್ನು ಬಂಧಿಸುವ ಮೂಲಕ ದೌರ್ಜನ್ಯ ಎಸಗಿದೆ ಎಂದು ದೂರಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು. ಇಲ್ಲವಾದರೆ ಮಂಗಳೂರು ಹಾಗೂ ಕರಾವಳಿ ಭಾಗದ ವಾತಾವರಣ ಇಡೀ ರಾಜ್ಯದಲ್ಲಿ ನಿರ್ಮಾಣವಾಗುತ್ತದೆ. ಸರ್ಕಾರದ ವಿರುದ್ಧದ ಜನಾಕ್ರೋಶ ವಿಧಾನಸೌಧ ಮುಟ್ಟುವವರೆಗೂ ಹೋರಾಟ ಮಾಡಬೇಕು ಎಂದು ಹೇಳಿದರು.ಬಿಜೆಪಿ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿಕೊಂಡು , ಅಲ್ಪಸಂಖ್ಯಾತರ ಓಲೈಕೆ ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹಾರಿಸಿದ್ದ ಹನುಮಧ್ವಜವನ್ನು ಸರ್ಕಾರ ಕೆಳಗ ಇಳಿಸುವ ಕೆಲಸ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಮತ ತಪ್ಪುತ್ತದೆ ಎಂಬ ಭಯದಿಂದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿಕೊಂಡು ಬರುತ್ತಿದೆ.ರಾಮ ಮಂದಿರ ನಿರ್ಮಾಣ ದಿಂದ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಶೇ.20ರಷ್ಟಿರುವ ಮುಸ್ಲಿಂ ಓಲೈಕೆಗೆ ಸರ್ಕಾರ ನಿಂತಿದೆ. ಹಿಂದೂಗಳು ಒಂದಾದರೆ ಯಾರು ಏನು ಮಾಡಲು ಆಗಲ್ಲ ಎಂದು ಹೇಳಿದರು.ರಾಮಮಂದಿರ ಕಟ್ಟಲು 500 ವರ್ಷ ಬೇಕಾಯಿತು. ಜ್ಞಾನ ವ್ಯಾಪಿ ದೇವಾಲಯ ಧರ್ಮದ ಪ್ರತೀಕ. ಅದನ್ನು ಬಿಟ್ಟು ಕೊಡಲು ಆಗುತ್ತದೆಯೇ. ಈಗ ಪ್ರತಿ ಮನೆಯಲ್ಲಿ ರಾಮಭಕ್ತರು ಹುಟ್ಟಿದ್ದಾರೆ. ಹಿಂದೂ ಧರ್ಮ, ಧಾರ್ಮಿಕತೆ ಉಳಿಸಿ ಕೊಳ್ಳಬೇಕಿದೆ. ಇದಕ್ಕಾಗಿ ಹಿಂದೂ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಹೇಳಿದರು.
ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು ಮಾತನಾಡಿ, ಕೆರೆಗೋಡು ಘಟನೆ ಖಂಡಿಸಿ ಇಡೀರಾಜ್ಯ ವ್ಯಾಪಿ ಹೋರಾಟ ನಡೆಯುತ್ತಿದೆ. ಸರ್ಕಾರ ಹನುಮಧ್ವಜ ಹಾರಿಸಲು ಅಡ್ಡಿ ಪಡಿಸಿದ್ದು ನಾಚಿಕೆಗೇಡು. ಪಾಕಿಸ್ತಾನ ದ ಧ್ವಜ ಹಾರಿಸಿದರೆ ಮೌನ ವಹಿಸುವ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ಧ್ವಜ ಕಂಡರೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮುಖಂಡರಾದ ಮುರಳೀಧರ್, ನರೇಂದ್ರ, ಹಾರೋಹಳ್ಳಿ ಚಂದ್ರು, ಕಿಶನ್ ಗೌಡ, ರುದ್ರದೇವರು, ರಮೇಶ್, ಅನಿಲ್‌ಬಾಬು, ಚಂದ್ರಶೇಖರ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.29ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.