ಸರ್ಕಾರದ ಒಳಮೀಸಲಾತಿ ನೀತಿ ಖಂಡಿಸಿ ಪ್ರತಿಭಟನೆ

| Published : Sep 05 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಒಳಮೀಸಲಾತಿ ಸೂತ್ರವನ್ನು ಖಂಡಿಸಿ ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮಾಜ ನೇತೃತ್ವದಲ್ಲಿ ನಗರದಲ್ಲಿ ಸೆ. 8ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ್‌, ಮಾಜಿ ಸಚಿವ ಬಾಬೂರಾವ ಚವ್ಹಾಣ್‌, ಸಮಾಜದ ಮುಖಂಡರಾದ ರಾಮಚಂದ್ರ ಜಾದವ್‌, ಪ್ರೇಮಸಿಂಗ್‌ ರಾಠೋಡ, ಚಂದು ಜಾಧವ್‌, ಅನೀಲ ಜಾಧವ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಒಳಮೀಸಲಾತಿ ಸೂತ್ರವನ್ನು ಖಂಡಿಸಿ ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮಾಜ ನೇತೃತ್ವದಲ್ಲಿ ನಗರದಲ್ಲಿ ಸೆ. 8ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ್‌, ಮಾಜಿ ಸಚಿವ ಬಾಬೂರಾವ ಚವ್ಹಾಣ್‌, ಸಮಾಜದ ಮುಖಂಡರಾದ ರಾಮಚಂದ್ರ ಜಾದವ್‌, ಪ್ರೇಮಸಿಂಗ್‌ ರಾಠೋಡ, ಚಂದು ಜಾಧವ್‌, ಅನೀಲ ಜಾಧವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ರೂಪಿಸಿರುವುದು ಅವೈಜ್ಞಾನಿಕ ನೀತಿ ಎಂದು ಖಂಡಿಸಿದರಲ್ಲದೆ ಇದರಿಂದ ಲಂಬಾಣಿ, ಕೊರಮ, ಕೊರಚ, ಬೋವಿ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮ ಸಮಾಜಗಳನ್ನೇ ತುಳಿಯುವ ಕೆಲಸ ಕಾಂಗ್ರೆಸ್‌ ಮಾಡಿದೆ ಎಂದರು.

ನಾಗಮೋಹನ ದಾಸ್‌ ವರದಿ ಶಿಫಾರಸು ಕೈಬಿಡಬೇಕು, ಈ ವರದಿಯಲ್ಲಿ ಅನೇಕ ತಪ್ಪುಗಳಿವೆ. ಮಾಧುಸ್ವಾಮಿ ವರದಿಯನ್ನು ಜಾರಿಗೆ ತರಬೇಕು ಎಂಬುದೇ ತಮ್ಮ ಆಗ್ರಹವೆಂದರು.

ಮೀಸಲಾತಿಯಲ್ಲಿ ಲಂಬಾಣಿ ಸಮಾಜದವರೇ ಹೆಚ್ಚಿನ ಲಾಭ ಪಡೆದಿದ್ದಾರೆಂದು ಬಿಂಬಿಸಲಾಗುತ್ತಿದೆ. ಇದು ತಪ್ಪು. ಲಂಬಾಣಿ, ಕೊರಮ, ಕೊರಚ, ಬೋವಿ ಸಮಾಜಗಳಿಗೆ ಮೀಸಲಾತಿ ಲಾಭ ಇನ್ನೂ ಪರಿಪೂರ್ಣ ದೊರಕಿಲ್ಲ. ಇದೀಗ ಒಳ ಮೀಸಲಾತಿಯಲ್ಲಿ ರಾಜ್ಯ ರೂಪಿಸಿರುವ ಸೂತ್ರದ ಪ್ರಕಾರ ನೋಡಿದರೆ ನಾವೆಲ್ಲರೂ ಪರಸ್ಪರ ಜಗಳ ಮಾಡುವಂತೆ ಮಾಡಿದ್ದಾರೆಂದು ಬಾಬೂರಾವ ಚವ್ಹಾಣ್‌ ದೂರಿದರು.

ಕಾಂಗ್ರೆಸ್‌ ಸರ್ಕಾರದ ಒಳ ಮೀಸಲಾತಿ ಸೂತ್ರದ ಹಿಂದೆ ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆಯವರ ಚಿಂತನೆ ಇದೆ. ಅವರು ಲಂಬಾಣಿ, ಕೊರಮ, ಕೊರಚ, ಬೋವಿ ಸಮಾಜ ತುಳಿಯುವ ಯತ್ನ ಮಾಡಿದ್ದಾರೆಂದು ದೂರಿದರು.

ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ಬಂಜಾರಾ, ಕೊರಮ, ಕೊರಚ, ಭೋವಿ, ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ 1 ಕೋಟಿ 8 ಲಕ್ಷ ಜನಸಂಖ್ಯೆ ಇದೆ. ಇದು ಒಟ್ಟಾರೆ ಶೇ.18 ಕ್ಕೆ ಸಮ. ಪರಿಶಿಷ್ಟರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.17ರಿಂದ ಶೇ.18ಕ್ಕೆ ಹೆಚ್ಚಿಸಲು ನಮ್ಮ ಒತ್ತಾಯವಿದೆ.

ನಾಗಮೋಹನ್‌ ದಾಸ್‌ ವರದಿಯಂತೆ ಬಂಜಾರಾ, ಕೊರಮ, ಕೊರಚ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳೇ ಮೀಸಲಾತಿ ವಂಟಚಿತವಾಗಿವೆ. ಮೀಸಲಾತಿ ಬಿಂದು ನಿಗದಿಮಾಡುವಾಗ ಈ ಸಮುದಾಯಗಳಿಗೇ ಆದ್ಯತೆ ನೀಡಬೇಕು ಎಂದು ಡಾ. ಉಮೇಶ ಜಾಧವ ಆಗ್ರಹಿಸಿದರು.

ಪರಿಶಿಷ್ಟ ಜಾತಿ ಒಳ ಮೀಸಲಾತಿಯಲ್ಲಿ ಸಿ ವಿಭಾಗಕ್ಕೆ ಅಸಂವಿಧಾನಿಕವಾಗಿ ಸ್ಪರ್ಶ ಎಂಬ ಪದ ಬಳಸಲಾಗಿದೆ. ಇದು ತಕ್ಷಣ ಕೈಬಿಡಬೇಕು, ಈ ಜಾಗದಲ್ಲಿ ವಿಮುಕ್ತ ಸಮುದಾಯಗಳೆಂದು ಪದ ಬಳಸಲಿ ಎಂದು ಡಾ. ಜಾಧವ ಆಗ್ರಹಿಸಿದರು.

ಅವೈಜ್ಞಾನಿಕವಾಗಿರುವ ಒಳ ಮೀಸಲಾತಿ ಜಾರಿಗೆ ಬಿಡೋದಿಲ್ಲ. ಸರ್ಕಾರದ ಈ ನಡೆ ಉಗ್ರವಾಗಿ ಖಂಡಿಸುತ್ತೇವೆ. ಇದನ್ನು ವಿರೋಧಿಸಿ ಸೆ. 8ರಂದು ಕಲಬುರಗಿಯಲ್ಲಿ, ಸೆ. 10ರಂದು ಬೆಂಗಳೂರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಹೋರಾಟ ಮಾಡಲಾಗುತ್ತದೆ ಎಂದು ಮುಖಂಡರು ಹೇಳಿದರು.

ಸಿದ್ರಾಮ ದಂಡಗುಲಕರ್‌, ರಾಮಣ್ಣ ಪರೀಟ್‌, ಪೇಂ ಸಿಂಗ್‌, ಈರಣ್ಣ ರಾವೂರಕರ್‌, ರಾಮಯ್ಯ ಪೂಜಾರಿ, ವೀರಣ್ಣ, ಶ್ಯಾಮರಾಯ ಪವಾರ್‌ ಸೇರಿದಂತೆ ಎಲ್ಲಾ ಸಮಾಜ ಮುಖಡರಿದ್ದರು.

ರಸ್ತೆತಡೆ, ಮಾನವ ಸರಪಳಿ ರಚಿಸಿ ಪ್ರತಿಭಟನೆ

ಕಲಬುರಗಿಯಲ್ಲಿ ಸೆ. 8 ರಂದು ನಗರದ ಜಗತ್‌ ವೃತ್ತದಿಂದ ಪಟೇಲ್‌ ವೃತ್ತದವರೆಗೂ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ಸಮಾಜದವರು ಸೇರಿಕೊಂಡು ಹೋರಾಟ ಮಾಡಲಾಗುತ್ತದೆ. ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿ ಆಗಲಿದ್ದಾರೆ. ಈ ಸಮಯದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದೂ ಬಾಬೂರಾವ ಚವ್ಹಾಣ್‌ ಹೇಳಿದ್ದಾರೆ.