ಬಿಹಾರದಲ್ಲಿನ ಬೌದ್ಧರಿಗೆ ವಿಹಾರ ನೀಡಲು ಪ್ರತಿಭಟನೆ

| Published : Mar 22 2025, 02:03 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬಿಹಾರದ ಬೌದ್ಧ ವಿಹಾರದ ಬುದ್ಧ ಗಯಾದ ಆಡಳಿತವನ್ನು ಬೌದ್ಧರಿಗೆ ವಹಿಸಬೇಕೆಂದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸುಗತಪಾಲ ಬಂತೇಜಿ, ಮನೋರಖ್ಖಿತ ಬಂತೇಜಿ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಿಹಾರದ ಬೌದ್ಧ ವಿಹಾರದ ಬುದ್ಧ ಗಯಾದ ಆಡಳಿತವನ್ನು ಬೌದ್ಧರಿಗೆ ವಹಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರಬುದ್ಧ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್, ಜೇತವನ ಬುದ್ಧವಿಹಾರ ಭಾರತೀಯ ಬೌದ್ಧ ಮಹಾಸಭಾ, ಡಾ.ಅಂಬೇಡ್ಕರ್ ಸಂಘಗಳ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನೆ ಮರವಣಿಗೆ ತಾಲೂಕು ಪಂಚಾಯಿತಿ ವೃತ್ತದಿಂದ ಸಾಗಿ ಪ್ರಮುಖ ರಸ್ತೆಗಳಲ್ಲಿ ಆಗಮಿಸಿ ತಾಲೂಕು ಕಚೇರಿ ಬಳಿ ಸಮಾವೇಶಗೊಂಡಿತು.

ಬಳಿಕ ತಮ್ಮ ಬೇಡಿಕೆಗಳನ್ನು ಈಡೇರಿಸಿ ಪ್ರದಾನಮಂತ್ರಿ, ರಾಷ್ಟ್ರಪತಿ, ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಗ್ರೇಡ್ 2 ಉಪ ತಹಸೀಲ್ದಾರ್ ಧನಂಜಯರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬೋಧಿರತ್ನ ಬಂತೇಜಿ ಮಾತನಾಡಿ, ಬಿಹಾರದ ಬುದ್ಧಗಯಾ ಮಹಾ ವಿಹಾರದ ಮುಕ್ತಿ ಆಂದೋಲನ ಪರವಾಗಿ ಕಳೆದ ಫೆಬ್ರವರಿಯಿಂದಲೂ ನ್ಯಾಯ ಕೇಳಿ ಧರಣಿ ಕುಳಿತಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕಲು ಬಿಹಾರ ಸರ್ಕಾರ ಮುಂದಾಗಿದೆ. ಬೌದ್ಧ ಬಿಕ್ಕುಗಳನ್ನು ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದು ಚಿಕಿತ್ಸೆ ನೀಡುತ್ತಿದ್ದಾರೆಯೆ ಅಥವಾ ಬಂಧಿಸಿದ್ದರೋ ತಿಳಿಯದಾಗಿದೆ. ಬುದ್ಧಗಯಾದ ಟ್ರಸ್ಟ್ ಜಿಲ್ಲಾಧಿಕಾರಿ ಸೇರಿದಂತೆ 4 ಜನ ಹಿಂದೂಗಳು, 4ಮಂದಿ ಬೌದ್ಧರಿದ್ದಾರೆ. ಈ ಕಮಿಟಿ ರದ್ದಾಗಬೇಕು. ಏಕೆಂದರೆ ಎಲ್ಲ ಧರ್ಮ ಕೇಂದ್ರಗಳು ಆ ಧರ್ಮದ ಅನುಯಾಯಿಗಳ ಸುಪರ್ದಿಯಲ್ಲಿರುತ್ತದೆ. ಆದರೆ, ಬುದ್ಧಗಯಾದಲ್ಲಿ ಈ ಪರಿಸ್ಥಿತಿ ಇಲ್ಲ. ಆದ್ದರಿಂದ ಬುದ್ಧಗಯಾ ಸಂಪೂರ್ಣ ಬೌದ್ಧರಿಗೆ ವಹಿಸಬೇಕು ಎಂದು ಕಿಡಿಕಾರಿದರು.ಈ ವೇಳೆ ಪ್ರತಿಭಟನೆಯಲ್ಲಿ ಚೆನ್ನಾಲಿಂಗನಹಳ್ಳಿ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಬಂತೇಜಿ, ಮೈಸೂರಿನ ಸುಗತಪಾಲ್ ಬಂತೇಜಿ, ಮೈಸೂರಿನ ವಿಶ್ವ ಮೈತ್ರಿ ಬುದ್ಧವಿಹಾರದ ಡಾ.ಕಲ್ಯಾಣಸಿರಿ ಬಂತೇಜಿ, ಮಂಗಳೂರು ಬುದ್ಧ ವಿಹಾರ ಧಮ್ಮಪಾಲ್ ಬಂತೇಜಿ, ಭಾರತೀಯ ಬೌದ್ಧ ಮಹಾಸಭೆಯ ರಾಚಪ್ಪಾಜಿ, ಸಿದ್ದರಾಜು, ಮಣಿ, ನಟರಾಜು ಮಾಳಿಗೆ, ಪುಟ್ಟಮ್ಮ, ಪುಟ್ಟಗೌರಿ, ರಾಜೇಶ್ವರಿ, ಚಂದನ್, ಚಿನ್ನಸ್ವಾಮಿ ಮಾಳಿಗೆ, ಭೀಮನಗರ ಯಜಮಾನರುಗಳು, ಅಂಬೇಡ್ಕರ್ ಸಂಘಟನೆಗಳ ಪದಾಧಿಕಾರಿಗಳು ಇನ್ನಿತರಿದ್ದರು.