ರಾಜ್ಯ ಸರ್ಕಾರ ಅಧಿವೇಶನದಲ್ಲಿ ಪ್ರತಿಪಕ್ಷದವರಿಗೆ ಚರ್ಚೆಗೆ ಅವಕಾಶ ನೀಡದೆ ಮಸೂದೆ ಪಾಸ್ ಮಾಡಿದ್ದಾರೆ

ಕಾರಟಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ೨೦೨೫ರ ವಿರುದ್ಧ ಪಟ್ಟಣದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ವಿಶೇಷ ಎಪಿಎಂಸಿ ಆವರಣಕ್ಕೆ ಆಗಮಿಸಿದ ಬಿಜೆಪಿಯ ವಿವಿಧ ಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಬರೆದ ಮನವಿ ಸಲ್ಲಿಸಿದರು.

ಈ ವೇಳೆ ಬಿಜೆಪಿ ಯುವಮೊರ್ಚಾ ಜಿಲ್ಲಾಧ್ಯಕ್ಷ ಮೋನೇಶ ಧಡೆಸೂಗುರ ಮಾತನಾಡಿ, ಈ ಬಾರಿ ಬೆಳಗಾವಿ ಅಧಿವೇಶನ ಕಾಟಾಚಾರಕ್ಕೆ ನಡೆಸಿದ ಆಧಿವೇಶನವಾಗಿತ್ತು. ದ್ವೇಷಭಾಷಣದ ಮಸೂದೆಗೆ ಅಧಿವೇಶನ ಕರೆದಂತಾಗಿದೆ. ಈ ಭಾರಿ ಅಧಿವೇಶನದಲ್ಲಿ ತುರ್ತು ಪರಿಸ್ಥಿತಿ ಮಾಡಿ ವಿಧೇಯಕ ಮಂಡನೆ ಮಾಡಿಕೊಂಡಿದ್ದಾರೆ. ದ್ವೇಷ ಭಾಷಣ ವಿಧೇಯಕ ಜಾರಿಗೆ ತರಲು ಮುಂದಾಗಿ ಮಾಧ್ಯಮ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕುತ್ತಿದೆ. ಕಠಿಣ ಕಾನೂನು ಜಾರಿಗೆ ಮುಂದಾಗುತ್ತಿದೆ. ಕೊಲೆ ಮಾಡಿದವರಿಗೆ ಶಿಕ್ಷೆ ನೀಡುವ ಬದಲು ಭಾಷಣ ಮಾಡಿದ ಎಂದು ಶಿಕ್ಷೆಗೊಳಪಡಿಸಲು ಮುಂದಾಗುತ್ತಿದೆ. ಈ ಮಸೂದೆ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷೆ ರತ್ನಕುಮಾರಿ ಮಾತನಾಡಿ, ರಾಜ್ಯ ಸರ್ಕಾರ ಅಧಿವೇಶನದಲ್ಲಿ ಪ್ರತಿಪಕ್ಷದವರಿಗೆ ಚರ್ಚೆಗೆ ಅವಕಾಶ ನೀಡದೆ ಮಸೂದೆ ಪಾಸ್ ಮಾಡಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಮುಖಂಡ ಸಿದ್ಧರಾಮಯ್ಯಸ್ವಾಮಿ ಹಿರೇಮಠ, ಶಿವಲೀಲಾ ಅಯೋಧ್ಯ, ಶರಣಬಸವರೆಡ್ಡಿ, ಮಂಜುನಾಥ ಮಸ್ಕಿ, ಮಾತನಾಡಿ, ಜಾಮೀನು ರಹಿತ ಪ್ರಕರಣ ದಾಖಲಿಸಿ ಸಂವಿಧಾನಬದ್ಧ ಹಕ್ಕು ಹತ್ತಿಕ್ಕಲು ಮುಂದಾಗುತ್ತಿದೆ. ತಮ್ಮ ಆಡಳಿತ ವೈಖರಿ ಬಗ್ಗೆ, ಭ್ರಷ್ಟಾಚಾರ ಬಗ್ಗೆ ಯಾರು ಮಾತನಾಡಬಾರದು ಎಂದು ದ್ವೇಷ ಭಾಷಣ ಕಾನೂನು ಜಾರಿಗೆ ಮುಂದಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುಂಚೆ ನವಲಿ ರಸ್ತೆಯ ಬಿಜೆಪಿ ಕಚೇರಿಯಿಂದ ಬೈಕ್ ಮೂಲಕ ಎಪಿಎಂಸಿ ಆವರಣದ ತಹಸೀಲ್ದಾರ ಕಚೇರಿಗೆ ಆಗಮಿಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ತಹಸೀಲ್ದಾರ ಕಚೇರಿ ಶಿರಸ್ಥೆದಾರ ಉಮಾಮಹೇಶ್ವರರವರಿಗೆ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಪಕ್ಷದ ಸುರೇಶ ದಢೇಸ್ಗೂರು, ತಿಪ್ಪಣ್ಣ ನಾಯಕ, ಹೊನ್ನೂರಪ್ಪ ಮಡಿವಾಳ, ಬಸವರಾಜ ಶೆಟ್ಟರ್, ಬಸವರಾಜ ಶಿವಶಕ್ತಿ, ಪುರಸಭೆ ಸದಸ್ಯ ಆನಂದ ಮೆಗಡೆಮನಿ, ಪ್ರಿಯಾಂಕ ಪವಾರ, ದೀಪಾ ಹಿರೇಮಠ, ಪಾರ್ವತಿ ಗುರಿಕಾರ, ಮಂಜುನಾಥ ನಾಯಕ, ದೇವರಾಜ ನಾಯಕ, ಮಂಜುನಾಥ ಹೋಸ್ಕೇರಾ, ವೀರಭದ್ರಪ್ಪ ಚನ್ನಳ್ಳಿ, ಶರಣಪ್ಪ ದೇವರಮನಿ, ಶಶಿಮೇದಾರ, ವೆಂಕಟೇಶ ಬೂದಿ, ವಿಜಯ ಕೆ, ಉಮೇಶ ನಾಯಕ, ವಿಜಯ ಹಿರೇಮಠ, ದೇವರಾಜ ಹುಳ್ಕಿಹಾಳ ಸೇರಿದಂತೆ ಪಕ್ಷದ ಇತರರು ಸೇರಿದಂತೆ ಕಾರ್ಯಕರ್ತರು ಇದ್ದರು.