ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಸ್ತೂರಿ ರಂಗನ್ ವರದಿ, 4-1 ನೋಟಿಫಿಕೇಷನ್, ಹಾಗೂ ಒತ್ತುವರಿ ತೆರವು ವಿರೋಧಿಸಿ ಮೆಣಸೂರು ಗ್ರಾಮ ಪಂಚಾಯಿತಿಯಲ್ಲಿ ರಸ್ತೆ ತಡೆ, ಬಾಳೆ ಗ್ರಾಪಂ ನಲ್ಲಿ ಮೆರವಣಿಗೆ, ಗುಬ್ಬಿಗಾ ಗ್ರಾಪಂ ನಲ್ಲಿ ವಿಶೇಷ ಗ್ರಾಮ ಸಭೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.ಮೆಣಸೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಗೆ ತಹಸೀಲ್ದಾರ್, ವಲಯ ಅರಣ್ಯಾಧಿಕಾರಿಗಳು ಗೈರು ಹಾಜರಾಗಿದ್ದರು. ಇದನ್ನು ಕಂಡು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದು ಆಗ್ರಹಿಸಿ ಮುಖ್ಯ ರಸ್ತೆಯಲ್ಲಿ 1 ಗಂಟೆಗಳ ರಸ್ತೆ ತಡೆ ಹಿಡಿದು ಪ್ರತಿಭಟಿಸಿದರು.
ನಂತರ ತಹಸೀಲ್ದಾರ್ ತನುಜ ಟಿ. ಸವದತ್ತಿ ಹಾಗೂ ವಲಯ ಅರಣ್ಯಾಧಿಕಾರಿ ಪ್ರವೀಣ್ ಬಂದ ನಂತರ ವಿಶೇಷ ಗ್ರಾಮ ಸಭೆ ಪ್ರಾರಂಭವಾಯಿತು. ಸಭೆಯಲ್ಲಿ ಕಸ್ತೂರಿ ರಂಗನ್ ವರದಿ, 4- ನೋಟಿಫಿಕೇಷನ್ ಹಾಗೂ ಒತ್ತುವರಿ ತೆರವು ಬಗ್ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.ಸಭೆಯಲ್ಲಿ ಮಲೆನಾಡು ರೈತರ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ಪುರುಶೋತ್ತಮ್ ಮಾತನಾಡಿ, ಜಿಲ್ಲಾಧಿಕಾರಿಗಳು ಸೆಕ್ಷನ್-4 ನೋಟಿಫಿಕೇಷನ್ ಮಾಡಲು ಅನುಮತಿ ನೀಡುವಾಗ ಗ್ರಾಮ ಸಭೆಯಲ್ಲಿ ಒಪ್ಪಿಗೆ ಪಡೆಯಲಿಲ್ಲ. ರೈತರು ಮಾಡಿದ ಒತ್ತುವರಿ ಭೂಮಿಯಲ್ಲಿ 3 ಎಕ್ರೆಯವರೆಗೆ ತೆರವುಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮದ ಮುಖಂಡ ಅಶ್ವನ್ ಮಾತನಾಡಿ, ನಮ್ಮ ಅಜ್ಜ, ಅಜ್ಜಿಯರ ಕಾಲದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದ ಭೂಮಿಯು, ಈಗ ಅರಣ್ಯಗೆ ಸೇರಿದ್ದು ಎನ್ನುತ್ತಾರೆ. ರೈತರ ಪರಿಸ್ಥಿತಿ ಗಂಭೀರವಾಗಿದೆ. ಆನೆ, ಕಾಡುಕೋಣ, ನವಿಲು,ಮಂಗಗಳ ಕಾಟದಿಂದ ರೈತರು ಫಲವು ಉಳಿಸಿಕೊಳ್ಳೋದು ಕಷ್ಟವಾಗಿದೆ. ಈಗ ಕಸ್ತೂರಿ ರಂಗನ್ ವರದಿ, 4-1 ನೋಟಿಫಿಕೇಷನ್ ಜಾರಿಯಾಗುತ್ತಿದೆ. ಜತೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದು ಜನರ ಬದುಕಿನ ನಡುವೆ ಸರಸವಾಡುವಂತಿದೆ ಎಂದು ನೋವು ಹರವಿದರು.ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾತನಾಡಿ, 2002 ರಲ್ಲಿ ಆಗ ಜಿಲ್ಲಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಅವರು 55 ಸಾವಿರ ಹೆಕ್ಟೇರ್ ಕಂದಾಯ ಭೂಮಿ ಅರಣ್ಯಾ ಇಲಾಖೆಗೆ ಹಸ್ತಾಂತರ ಮಾಡಿದ್ದರು. ನಂತರ 10 ಸಾವಿರ ಹೆಕ್ಟೇರ್ ಕಂದಾಯ ಇಲಾಖೆಗೆ ವಾಪಾಸ್ಸು ನೀಡಲಾಗಿತ್ತು. 45 ಸಾವಿರ ಹೆಕ್ಟೇರ್ ಅರಣ್ಯ ಇಲಾಖೆಯಲ್ಲಿ ಉಳಿದಿತ್ತು ಎಂದು ಮಾಹಿತಿ ನೀಡಿದರು.
2006 ರಲ್ಲಿ ಸೆಕ್ಷನ್- 4 ನೋಟಿಫಿಕೇಷನ್ ಮಾಡುವಾಗ, ರೈತರು ಒತ್ತುವರಿ ಮಾಡಿದ ಭೂಮಿ ಬಿಟ್ಟು ನೋಟಿಫಿಕೇಷನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮತ್ತೆ 19 ಸಾವಿರ ಹೆಕ್ಟೇರ್ ಭೂಮಿ ಕಂದಾಯ ಇಲಾಖೆಗೆ ಬಿಟ್ಟುಕೊಡಲಾಗಿದೆ. ಪ್ರಸ್ತುತ ನ್ಯಾಯಾಲಯದ ಆದೇಶ ಇರುವ ಒತ್ತುವರಿ ಪ್ರಕರಣದಲ್ಲಿ 3 ಎಕ್ರೆ ಜಾಗ ಬಿಟ್ಟು ಹೆಚ್ಚಿಗೆ ಇರುವ ಭೂಮಿಯನ್ನು ಮಾತ್ರ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.ತಹಸೀಲ್ದಾರ್ ತನುಜ ಟಿ. ಸವದತ್ತಿ ಮಾತನಾಡಿ, ನಾವು ರೈತರ ಪರವಾಗಿದ್ದೇವೆ. ಗೋಮಾಳ ಭೂಮಿಯಲ್ಲಿ ನೋಟಿಫಿಕೇಷನ್ ಆದಂತೆ ಇಂಡೀಕರಣ ಆಗಿಲ್ಲ. ನಾವು ಕೆಳ ಹಂತದ ಅಧಿಕಾರಿಗಳಾಗಿದ್ದು ಸರ್ಕಾರದ ಕಾನೂನನ್ನು ಪಾಲಿಸುತ್ತೇವೆ ಅಷ್ಟೇ ಎಂದರು.
ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್. ನಾಗೇಶ್ ಮಾತನಾಡಿ, ಮಲೆನಾಡ ರೈತರ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ, 4- ನೋಟಿಫಿಕೇಷನ್ ಹಾಗೂ ಒತ್ತುವರಿ ತೆರವು ವಿರೋಧಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ ಎಂದರು.2014 ರಿಂದ ಪದೇ, ಪದೇ ಆಕ್ಷೇಪಣೆ ಸಲ್ಲಿಸುತ್ತಾ ಇದ್ದೇವೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಆ ಗ್ರಾಮಗಳ ಜತೆಗೆ 10 ಕಿ.ಮೀ. ಬಫರ್ ಝೋನ್ ಸಹ ಆಗಲಿದೆ. ಮೆಣಸೂರು ಗ್ರಾಮ ಪಂಚಾಯಿತಿಯಲ್ಲಿ 4-1 ನೋಟಿಫಿಕೇಷನ್ ತೀವ್ರತೆ ಜಾಸ್ತಿ ಇದೆ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು ಸತೀಶ್, ಸದಸ್ಯರಾದ ಶ್ರೀನಾಥ್, ಎನ್.ಡಿ. ಪ್ರಸಾದ್, ಬಿನು, ಅಣ್ಣಪ್ಪ, ರಚಿತ, ಯಾಸ್ಮೀನ್, ಉಮಾ, ಶಿಲ್ಪ, ಪ್ರವೀಣ್, ಪಿ.ಡಿ. ಸಂತೋಷ್ ಕುಮಾರ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.ಬದುಕು ಕಟ್ಟಿಕೊಂಡು ಅರಣ್ಯ ರಕ್ಷಿಸಿದ್ದಾರೆ
ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲೂ ವಿಶೇಷ ಗ್ರಾಮ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಮಾತನಾಡಿ, ಇಲ್ಲಿನ ಜನರು ತಮ್ಮ ಬದುಕು ಕಟ್ಟಿಕೊಂಡು ಅರಣ್ಯ ರಕ್ಷಿಸಿದ್ದಾರೆ. ಗ್ರಾಮಸ್ಥರ ಅಹವಾಲನ್ನು ಸರ್ಕಾರಕ್ಕೆ ತಲುಪಿಸಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಕೆಡಿಪಿ ಸದಸ್ಯ ಕೆ.ವಿ. ಸಾಜು, ತಾ. ಬಗರ್ ಹುಕಂ ಸಮಿತಿ ಸದಸ್ಯ ಇ.ಸಿ. ಜೋಯಿ, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಡಿ. ಲೋಕೇಶ್, ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಸದಸ್ಯ ಚರಣಕುಮಾರ್ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಪಿ.ಡಿ.ಓ ಸೀಮಾ, ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಸ್ತೂರಿ ರಂಗನ್ ವರದಿ ವಿರೋದಿಸುವ ನಿರ್ಣಯ ಕೈಗೊಳ್ಳಲಾಯಿತು.ಬಾಳೆ ಗ್ರಾಂಪಂನಲ್ಲೂ ಸಭೆ
ಬಾಳೆ ಗ್ರಾಮ ಪಂಚಾಯಿತಿಯಲ್ಲೂ ವಿಶೇಷ ಗ್ರಾಮ ಸಭೆ ನಡೆಯಿತು. ಕಸ್ತೂರಿ ರಂಗನ್ ವರದಿ, 4- ನೋಟಿಫಿಕೇಶನ್, ಒತ್ತುವರಿ ತೆರವು ವಿರೋಧಿಸಿ ಮೆರವಣಿಗೆ ಮೂಲಕ ವಿಶೇಷ ಗ್ರಾಮ ಸಭೆಗೆ ಹಾಜರಾದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ವಹಿಸಿದ್ದರು. ಉಪಾಧ್ಯಕ್ಷ ಪ್ರಿಯೇಶ್, ಪಿ.ಡಿ.ಓ. ಪ್ರೇಮ, ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಮಲೆನಾಡು ನಾಗರೀಕ ರೈತರ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್. ನಾಗೇಶ್ ಮಾಹಿತಿ ನೀಡಿದರು.