ಅದಿರು ಲಾರಿ ಸಂಚಾರ ವಿರೋಧಿಸಿ ಪ್ರತಿಭಟನೆ

| Published : Feb 09 2024, 01:47 AM IST

ಸಾರಾಂಶ

ರೈತರ ಬೇಡಿಕೆ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳು ೨ ತಿಂಗಳು ಕಾಲಾವಕಾಶ ಕೋರಿದ್ದರಿಂದ, ಅದಕ್ಕೆ ಸಮ್ಮತಿಸಿದ ರೈತರು ತಮ್ಮ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

ಸಂಡೂರು: ಸಂಡೂರು ಬಳಿ ಹೊಸಪೇಟೆ- ಬಳ್ಳಾರಿ ರಸ್ತೆ ಸಂಪರ್ಕಿಸುವ ಬೈಪಾಸ್ ರಸ್ತೆಯಿಂದ ತಿಮ್ಮಪ್ಪನಗುಡಿ ಮೈನ್ಸ್ ಮಾರ್ಗದಲ್ಲಿ ಖಾಲಿ ಮತ್ತು ಅದಿರು ತುಂಬಿದ ಲಾರಿಗಳು ಸಂಚರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಹಸಿರು ರೈತ ಸಂಘದ ಸದಸ್ಯರು ಗುರುವಾರ ಮೈನ್ಸ್ ಮಾರ್ಗದಲ್ಲಿ ಅದಿರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಪಿ.ಎಸ್. ಧರ್ಮಾನಾಯ್ಕ್, ಬೈಪಾಸ್ ಕಡೆಯಿಂದ ತಿಮ್ಮಪ್ಪನಗುಡಿ ಮೈನ್ಸ್ ಮಾರ್ಗದಲ್ಲಿ ಅದಿರು ತುಂಬಿದ ಮತ್ತು ಖಾಲಿ ಲಾರಿಗಳು ಸಂಚರಿಸುತ್ತಿರುವುದರಿಂದ ಅಲ್ಲಿ ಏಳುವ ಧೂಳಿನಿಂದ ಅಕ್ಕಪಕ್ಕದ ರೈತರಿಗೆ, ಕುರಿಗಾಹಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಗಣಿ ಧೂಳಿನಿಂದಾಗಿ ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. ಈ ಹಿಂದೆ ಇದ್ದಂತೆ ಮುರಾರಿಪುರ ಮಾರ್ಗದಿಂದ ಖಾಲಿ ಲಾರಿಗಳು ಬರಬೇಕು. ಬೈಪಾಸ್ ಮಾರ್ಗದಿಂದ ತಿಮ್ಮಪ್ಪನಗುಡಿಗೆ ಹೋಗುವ ಮಾರ್ಗದಲ್ಲಿ ಅದಿರು ತುಂಬಿದ ಲಾರಿಗಳು ಬರಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸುದ್ದಿ ತಿಳಿದು ಈ ಮಾರ್ಗದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಎಂಎಂಎಲ್ ಗಣಿ ಕಂಪನಿಯ ಅಧಿಕಾರಿ ಬಸವರಾಜ್ ಅವರು ರೈತರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿ, ರೈತರೊಂದಿಗೆ ಮಾತುಕತೆ ನಡೆಸಿದರು.

ರೈತರ ಬೇಡಿಕೆ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳು ೨ ತಿಂಗಳು ಕಾಲಾವಕಾಶ ಕೋರಿದ್ದರಿಂದ, ಅದಕ್ಕೆ ಸಮ್ಮತಿಸಿದ ರೈತರು ತಮ್ಮ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

ರೈತ ಸಂಘದ ಮುಖಂಡರಾದ ವಿ.ಜೆ. ಶ್ರೀಪಾದಸ್ವಾಮಿ, ಸಂತೋಷ್, ಹುಚ್ಚಪ್ಪ ಮುಂತಾದವರು ಉಪಸ್ಥಿತರಿದ್ದರು.