ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬೆಂಗಳೂರಿನ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ನಾಯ್ಡು ಎಸ್ಸಿ, ಎಸ್ಟಿ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಂಚಕ್ಕೆ ಬೇಡಿಕೆ ಇಟ್ಟು ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪದ ಅಡಿಯಲ್ಲಿ, ಇವರ ವಿರುದ್ಧ ಎಸ್ಸಿ,ಎಸ್ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕ ವಿಭಾಗದ ಮುಖಂಡರು ಪ್ರತಿಭಟನೆ ನಡೆಸಿದರು.ಪಟ್ಟಣದ ಮಸೀದಿ ವೃತ್ತದ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಮುನಿರತ್ನ ವಿರುದ್ಧ ಧಿಕ್ಕಾರ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿ ಬಳಿಕ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಟೌನ್ ಪೊಲೀಸ್ ಠಾಣೆಯ ಮುಂದೆ ಸಮಾವೇಶಗೊಂಡು ಪಿಎಸ್ಐ ವರ್ಷ ಅವರಿಗೆ ಮನವಿ ಸಲ್ಲಿಸಿದರು.ಈ ಸಂಬಂಧ ನಗರಸಭೆ ಅದ್ಯಕ್ಷೆ ರೇಖಾ ರಮೇಶ್ ಮಾತನಾಡಿ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರ, ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ ಅವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತುಕತೆ ವೇಳೆ ಹಣಕ್ಕೆ ಬೇಡಿಕೆ ಇಟ್ಟು ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಮಂಚಕ್ಕೆ ಕರೆದ ಶಾಸಕ ಮುನಿರತ್ನ ನಾಯ್ಡು ವಿರುದ್ಧ ನಮ್ಮ ಹೋರಾಟವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ತಿಳಿಸುತ್ತೇವೆ.
ಸಂವಿಧಾನದ ಆಶ್ರಯದಂತೆ ಒಬ್ಬ ಜನಪ್ರತಿನಿಧಿ ಆದವನು ತಮ್ಮ ಕ್ಷೇತ್ರದ ಸರ್ವ ಜನಾಂಗದ ಒಬ್ಬ ಸೇವಕನಾಗಿ ಸೇವೆ ಮಾಡುವುದು ಒಬ್ಬ ಜನಪ್ರತಿನಿಧಿಯ ಕರ್ತವ್ಯ. ಅದನ್ನು ಬಿಟ್ಟು ಕ್ಷೇತ್ರದ ಹಲವು ಸಮುದಾಯದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾನೆ. ಅಂದರೆ ಪ್ರತಿಯೊಬ್ಬರೂ ಯೋಚಿಸಬೇಕು. ಕರ್ನಾಟಕ ಸರ್ಕಾರದ ಮಾನ್ಯ ಸಭಾಪತಿ ಗಮನಕ್ಕೆ ಈ ಮೂಲಕ ತರುತ್ತೇವೆ, ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಇವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಸ್ಸಿ ಕಾಂಗ್ರೆಸ್ ಘಟಕ ರಾಜ್ಯ ಸಂಚಾಲಕರು ನಾಗರಾಜು, ನಟರಾಜು ಮಾಳಿಗೆ, ನಗರಸಭೆ ಅಧ್ಯಕ್ಷೆ ರೇಖಾರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರು ಮಂಜುನಾಥ್, ಶಾಂತರಾಜು, ರಾಘವೇಂದ್ರ, ಮಾಜಿ ಸದಸ್ಯ ಅಕ್ಮಲ್ ಪಾಷ, ಮುಖಂಡರು ಶೇಖರ್ ಬುದ್ಧ, ರಮೇಶ್, ಜಗದೀಶ್ ಶಂಕರಪುರ, ಚಿನ್ನಸ್ವಾಮಿ ಮಾಳಿಗೆ, ಸ್ವಾಮಿ ನಂಜಪ್ಪ, ದಿಲೀಪ್ ಸಿದ್ದಪ್ಪಾಜಿ ಹಾಗೂ ಇತರರು ಇದ್ದರು.