ಕನಕಗಿರಿ: ತುಳಸಿ, ನುಜುಡಾ, ಮೈಕೋ ಸೇರಿದಂತೆ ನೂರಕ್ಕೂ ಅಧಿಕ ಹತ್ತಿ ಬೀಜೋತ್ಪಾದನಾ ಕಂಪನಿಗಳು ರೈತರಿಂದ ಖರೀದಿಸಿದ ಬೀಜದ ಮೊತ್ತವನ್ನು ಪಾವತಿಸದಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ನಾನಾ ಬೀದಿಗಳಲ್ಲಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಜಿಲ್ಲಾಧ್ಯಕ್ಷ ಗಣೇಶರೆಡ್ಡಿ ಮಾತನಾಡಿ, ನೂರಕ್ಕೂ ಹೆಚ್ಚು ಹತ್ತಿ ಬೀಜೋತ್ಪಾದನಾ ಕಂಪನಿಗಳು ಬೀಜ ಖರೀದಿಸಿ ಹಣ ನೀಡದೆ ಮೋಸ ಮಾಡಲು ಮುಂದಾಗಿವೆ. ಹತ್ತಿ ಬೀಜಗಳನ್ನು ಖರೀದಿಸಿದ ಕಂಪನಿ ಮಾಲೀಕರು ಕೂಡಲೇ ಸಂಬಂಧಿಸಿದ ರೈತರಿಗೆ ಹಣ ಪಾವತಿಸಬೇಕು. ಯಾವೊಬ್ಬ ರೈತನಿಗೆ ಅನ್ಯಾಯ ಮಾಡಿದ್ದು ಕಂಡುಬಂದಲ್ಲಿ ಅಂತಹ ಕಂಪನಿ ವಿರುದ್ಧ ಪ್ರತಿಭಟಿಸಿ, ಆ ಕಂಪನಿಗಳ ಪರವಾನಗಿ ರದ್ದುಪಡಿಸಲು ಆಗ್ರಹಿಸಿ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಕನಕಗಿರಿ ತಾಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡಬೇಕು. ಸಿರಿವಾರದ ಬಳಿ ತೋಟಗಾರಿಕೆ ಪಾರ್ಕನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ತಾಲೂಕು ಕೇಂದ್ರವಾಗಿ 9 ವರ್ಷ ಕಳೆದಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳ ಕಾರ್ಯಾರಂಭಿಸಬೇಕು. ಕಾಲಮಿತಿಯೊಳಗೆ ಗ್ರಾಪಂ ಹಾಗೂ ಪಪಂ ಕಚೇರಿಗಳಲ್ಲಿ ಫಾರಂ-3 ನೀಡಬೇಕು. ತ್ರಿವೇಣಿ ಸಂಗಮದಲ್ಲಿ ಹಲವು ವರ್ಷಗಳಿಂದ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಮುನ್ನ ಸ್ವಚ್ಛಗೊಳಿಸಲು ಮುಂದಾಗಬೇಕು. ತಾಲೂಕಿನಾದ್ಯಂತ ಕಳ್ಳತನ, ಮಟ್ಕಾ, ಜೂಜಾಟ, ಇಸ್ಪೀಟ್ ಸೇರಿ ಕಾನೂನುಬಾಹಿರ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಅಕ್ರಮ ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶೌಚಾಲಯ ನಿರ್ಮಿಸಬೇಕು. ತಾಲೂಕಲ್ಲಿ ಹೆಚ್ಚಾಗಿರುವ ಕಳಪೆ ಬೀಜದ ಹಾವಳಿ ತಡೆಗಟ್ಟಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.ರೈತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಚಂದ್ರಶೇಖರ ಭರವಸೆ ನೀಡಿದ್ದರಿಂದ ಜೂ. 24ರಂದು ಪಟ್ಟಣ ಬಂದ್ ಮಾಡುವ ನಿರ್ಧಾರ ವಾಪಸ್ ಪಡೆದು, ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ ಎಂದರು.
ಹಿರಿಯ ಮುಖಂಡ ನಜೀರಸಾಬ ಮೂಲಿಮನಿ ಮಾತನಾಡಿ, ಕನಕಗಿರಿ ಪಟ್ಟಣದ ಎಪಿಎಂಸಿ ಮಳಿಗೆಗಳನ್ನು ಅನಧಿಕೃತವಾಗಿ ರಸ್ತೆಗೆ ಮುಖ ಮಾಡಿ ನಿರ್ಮಿಸಿದ್ದು, ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಎಪಿಎಂಸಿ ಕಾಯಿದೆ ಅನ್ವಯ ರೈತರಿಗೆ ಸಂಬಂಧಿಸಿದ ಅಂಗಡಿಗಳನ್ನು ಮಾತ್ರ ತೆರೆಯಬೇಕು. ಆದರೆ ಇಲ್ಲಿ ಖಾನಾವಳಿ, ಹೋಟೆಲ್, ಪೇಂಟ್, ಮೊಬೈಲ್, ಬ್ಯಾಂಕ್ ಸೇರಿದಂತೆ ನಾನಾ ವ್ಯಾಪಾರ ವಹಿವಾಟಿಗೆ ಎಪಿಎಂಸಿ ಮಳಿಗೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಕೆಲವು ದಲಾಲಿ ವರ್ತಕರು ನೀಲನಕ್ಷೆಯಂತೆ ಕಟ್ಟಡ ನಿರ್ಮಿಸಿಕೊಂಡಿಲ್ಲ. ಎಪಿಎಂಸಿ ಕಾಯಿದೆ, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ಅರಂಭಗೊಂಡ ಪ್ರತಿಭಟನಾ ಮೆರವಣಿಗೆ ಕನಕದಾಸ ವೃತ್ತ, ರಾಜಬೀದಿಯ ಮಾರ್ಗವಾಗಿ ವಾಲ್ಮೀಕಿ ವೃತ್ತದಿಂದ ಎಪಿಎಂಸಿಯ ರೈತ ವೃತ್ತದ ವರೆಗೆ ನಡೆಯಿತು. ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಹನುಮನಗೌಡ ಪಾಟೀಲ್, ಮರಿಯಪ್ಪ ಹುಗ್ಗಿ, ಬಸವರಾಜ ದೇಸಾಯಿ, ಕೃಷ್ಣಪ್ಪ ಕಾಕಿ, ವೀರೇಶ, ಮಲ್ಲಮ್ಮ ಹೂಗಾರ ಹಾಗೂ ಕುಷ್ಟಗಿ, ಬಸರಿಹಾಳ, ಕನಕಾಪುರ, ಗೌರಿಪುರ, ಕುಕನೂರು, ಹನುಮನಾಳ, ಬೈಲಕ್ಕಂಪುರ ಗ್ರಾಮಗಳಿಂದ ರೈತರು ಆಗಮಿಸಿದ್ದರು.