ಸಾರಾಂಶ
ಕಾರಟಗಿ: ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ ಸಂಸ್ಥೆಯ ಮೂಲಕವೇ ಅಸಂವಿಧಾನಿಕ ರೀತಿಯಲ್ಲಿ ಸಾಮಗ್ರಿ ಖರೀದಿಸಬೇಕು ಎನ್ನುವ ಧೋರಣೆ ವಿರೋಧಿಸಿ ರಾಜ್ಯ ಸಿವಿಲ್ ಗುತ್ತಿಗೆದಾರರ ಜಿಲ್ಲಾ ಸಂಘದಿಂದ ಕೊಪ್ಪಳದಲ್ಲಿ ನ. ೧೨ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ, ಗುತ್ತಿಗೆದಾರ ಸುರೇಶ ಭೂಮರೆಡ್ಡಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಪೂವಿಭಾವಿ ಸಭೆಯಲ್ಲಿ ಕಾರಟಗಿ -ಕನಕಗಿರಿ -ಗಂಗಾವತಿ ತಾಲೂಕುಗಳ ಗುತ್ತಿಗೆದಾರರೊಂದಿಗೆ ಚರ್ಚಿಸಿ ಅವರು ಮಾತನಾಡಿದರು.ಫೆ. ೧೨ರಂದು ಜಿಲ್ಲೆಯ ಎಲ್ಲ ಸಿವಿಲ್ ಗುತ್ತಿಗೆದಾರರು ಕೊಪ್ಪಳದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೆ ಗುತ್ತಿಗೆದಾರರ ವಾಹನಗಳಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನದ ಮುಂದೆ ಒಂದು ದಿನದ ಸಾಂಕೇತಿಕವಾಗಿ ಧರಣಿ ನಡೆಸಲಾಗುವುದು ಎಂದು ಭೂಮರೆಡ್ಡಿ ಹೇಳಿದರು.
ಸರ್ಕಾರದ ಗಮನ ಸೆಳೆಯಲು ನ. ೧೩ರಿಂದ ಜಿಲ್ಲೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ದುರಾಡಳಿತ ವಿರೋಧಿ ಮತ್ತು ಪ್ರೇರಣಾ ಏಜೆನ್ಸಿ ವಿರುದ್ಧ ಸರ್ಕಾರಿ ಕಾಮಗಾರಿಗಳನ್ನು ನಡೆಸದೆ ಕೆಲಸ ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುತ್ತದೆ. ಸಂಸದ ಹಿಟ್ನಾಳ ಅವರು ಸ್ಥಾಪಿಸಿದ ಪ್ರೇರಣಾ ಸಂಸ್ಥೆ ಸಾಮಾನ್ಯ ಜನರಿಗೆ, ಗುತ್ತಿಗೆದಾರರಿಗೆ ಮರಣಶಾಸನವಾಗಲಿದೆ. ಅದರ ವಿರುದ್ಧ ಈಗ ಜಿಲ್ಲೆಯ ಗುತ್ತಿಗೆದಾರರ ಸಂಘದಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಭೂಮರೆಡ್ಡಿ ಸ್ಪಷ್ಟಪಡಿಸಿದರು.ಕ್ರಷರ್ ಉದ್ಯಮವನ್ನು ಜಿಲ್ಲೆಯಲ್ಲಿ ಸಂಸದರು ಏಕಸ್ವಾಮ್ಯ ಮಾಡಿಕೊಂಡ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಸಂಸದರ ಹಣಬಾಕ ಸಂಸ್ಕೃತಿಯಿಂದ ಕ್ರಷರ್ ಪರಿಕರಿಗಳೆಲ್ಲ ದುಬಾರಿಯಾಗಿದೆ. ಇದು ಜನಸಾಮಾನ್ಯರಿಗೆ ಮರಣಶಾಸನ. ಈ ವ್ಯವಸ್ಥೆಯ ವಿರುದ್ಧವೇ ಈ ಜನಾಂದೋಲನ ಎಂದರು.
ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾದ ಬಾಕಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಹಿಂಬಾಕಿಯಾಗುತ್ತಿದೆ. ಹೀಗಾಗಿ ಸಿವಿಲ್ ಗುತ್ತಿಗೆದಾರರೆಲ್ಲ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಬಾರಿ ಬಡ್ಡಿ ದರದಲ್ಲಿ ಸಾಲ ತಂದು ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದೇವೆ. ಆದರೆ ಸಕಾಲಕ್ಕೆ ಸರ್ಕಾರದಿಂದ ಬಾಕಿ ಹಣ ಬರುತ್ತಿಲ್ಲ. ಜಿಲ್ಲೆಯ ಬಹುತೇಕ ಸಿವಿಲ್ ಗುತ್ತಿಗೆದಾರರು ವಿವಿಧ ಕ್ರಶರ್‌ಗಳು, ಸಿಮೆಂಟ್ ಅಂಗಡಿಗಳು ಕಬ್ಬಿಣದ ಅಂಗಡಿಗಳಲ್ಲಿ ಸಾಲ ಪಡೆದುಕೊಂಡಿದ್ದು, ಅದನ್ನು ತೀರಿಸಲಾಗದೆ ಪರದಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಹಿಟ್ನಾಳ ಅವರ ರಾಜಕೀಯ ಪ್ರಭಾವದಿಂದ ಪ್ಯಾಕೇಜ್ ಟೆಂಡರ್ ಪದ್ಧತಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸುರೇಶ ಭೂಮರೆಡ್ಡಿ ಆತಂಕ ವ್ಯಕ್ತಪಡಿಸಿದರು.ಎಸ್‌ಸಿ-ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಹನುಮೇಶ ಕಡೇಮನಿ ಮಾತನಾಡಿ, ಮೂರು ವರ್ಷಗಳಿಂದ ಗುತ್ತಿಗೆದಾರರ ಬಿಲ್‌ಗಳು ಪಾವತಿಯಾಗದೇ ಬಾಕಿ ಉಳಿದಿವೆ. ಹೀಗಾಗಿ ನಾವೆಲ್ಲ ಆರ್ಥಿಕ ಸಮಸ್ಯೆಯಲ್ಲಿ ಇದ್ದೇವೆ. ಇಂಥ ಸ್ಥಿತಿಯಲ್ಲಿ ಸಂಸದರು ಹಾಗೂ ಕೊಪ್ಪಳದ ಶಾಸಕರು ಹೊರ ಜಿಲ್ಲೆಯ ಗುತ್ತಿಗೆದಾರರ ಹೆಸರಿನಲ್ಲಿ ತಾವೇ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಯಂತ್ರೋಪಕರಗಳು, ವಾಹನಗಳು, ಸಿಬ್ಬಂದಿ ವೇತನ ನಿರ್ವಹಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಯ ಸಣ್ಣ ಹಾಗೂ ಮಧ್ಯಮ ದರ್ಜೆಯ ಗುತ್ತಿಗೆದಾರರು ನಾಶವಾಗುತ್ತಾರೆ. ಮಾರುಕಟ್ಟೆಯಲ್ಲಿ ಪರಿಕರಗಳನ್ನು ಏಕಸ್ವಾಮ್ಯ ಪದ್ಧತಿಯಲ್ಲಿ ಒತ್ತಾಯಪೂರ್ವಕವಾಗಿ ಹೇರುವುದು ಸರಿಯಾದ ಕ್ರಮವಲ್ಲ. ಸಂಸದರ ಈ ಧೋರಣೆ ವಿರೋಧಿ ಹೋರಾಟ ಆರಂಭಿಸಿದ್ದೇವೆ ಎಂದರು.
ಗುತ್ತಿಗೆದಾರ ಶರಣಬಸವ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುತ್ತಿಗೆದಾರರಾದ ದೇವಪ್ಪ ಅರಕೇರಿ, ವಿಜಯ ಕುಮಾರ ಕೋಲ್ಕಾರ್, ಜಿ. ಸುರೇಶ, ಪಂಪನಗೌಡ ಗುಂಡೂರು, ಲೀಲಾಧರ ನಾಯಕ, ಹನುಮಂತಪ್ಪ ನಾಗನಕಲ್, ಚೆನ್ನಬಸವ ಅರ‍್ಹಾಳ, ಚೆನ್ನಬಸವ ಹೇರೂರು, ರಾಜಶೇಖರ ಗಂಗಾವತಿ, ದೇವರಾಜ ಕಾರಟಗಿ ಇದ್ದರು.;Resize=(128,128))
;Resize=(128,128))
;Resize=(128,128))