ಸಾರಾಂಶ
ಬೆಂಗಳೂರು : ಉದ್ಯಮಿಗಳಾದ ಅಂಬಾನಿ, ಅದಾನಿ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಟೆಂಪೊಗಟ್ಟಲೇ ಹಣ ಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಖಂಡಿಸಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥಗೌಡ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ನಡೆಸಿದರು.
ಟೆಂಪೋಗಳಲ್ಲಿ ಹಣದ ಸೂಟ್‌ಕೇಸ್ ಹಾಗೂ ಡ್ರಗ್ಸ್ ತುಂಬಿರುವಂತೆ ಅಣಕು ಪ್ರದರ್ಶನ ಮಾಡಿದ ಕಾರ್ಯಕರ್ತರು ಮೊದಲು ಅದಾನಿ ಹಾಗೂ ಅಂಬಾನಿ ವಿರುದ್ಧ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್.ಎಸ್. ಮಂಜುನಾಥಗೌಡ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಅದಾನಿ ಹಾಗೂ ಅಂಬಾನಿ ಕಾಂಗ್ರೆಸ್‌ಗೆ ಹಣ ನೀಡುತ್ತಾರೆ ಎಂದಿದ್ದಾರೆ. ಅವರು ಬಿಜೆಪಿಗೆ ಹಣ ನೀಡಿದ್ದಾರೆ. ಕಾಂಗ್ರೆಸ್‌ಗೆ ಕಪ್ಪು ಹಣ ನೀಡಿರುವುದಾದರೆ ಐಟಿ, ಇಡಿ ಎಲ್ಲವೂ ಅವರ ಬಳಿಯೇ ಇದೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಗುಜರಾತ್‌ನಲ್ಲಿ ಮಾದಕ ವಸ್ತುಗಳು ಸಾಗಣೆ ಆಗುತ್ತಿದೆ. 5 ಲಕ್ಷ ಕೋಟಿಯಷ್ಟು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಅದು ಎಲ್ಲಿ ಹೋಯಿತು ಎಂಬುದು ಪತ್ತೆಯಿಲ್ಲ. ಅದಾನಿ ಬಂದರಿನಲ್ಲೇ ಡ್ರಗ್ಸ್ ಪತ್ತೆಯಾದರೂ ಯಾಕೆ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ಏನೆಲ್ಲಾ ನಡೆಯುತ್ತಿದೆ ಎಂಬುದು ಪತ್ತೆಯಾಗಬೇಕಾದರೆ ತನಿಖೆಯಾಗಬೇಕು ಎಂದು ಆಗ್ರಹ ಮಾಡಿದರು.