ಫೋರ್ಜರಿ ದಾಖಲೆ ಸೃಷ್ಟಿಸಿ ಚುನಾವಣೆ ನಿಯಮ ಉಲ್ಲಂಘಿಸಿದ ಸಹಾಯಕ ನಿಬಂಧಕ ವಿರುದ್ಧ ಪ್ರತಿಭಟನೆ

| N/A | Published : Mar 06 2025, 12:36 AM IST / Updated: Mar 06 2025, 11:29 AM IST

ಫೋರ್ಜರಿ ದಾಖಲೆ ಸೃಷ್ಟಿಸಿ ಚುನಾವಣೆ ನಿಯಮ ಉಲ್ಲಂಘಿಸಿದ ಸಹಾಯಕ ನಿಬಂಧಕ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೋರ್ಜರಿ ದಾಖಲೆ ಸೃಷ್ಟಿಸಿ 10ಜನ ಖುದ್ದು ನಾಮಪತ್ರ ಹಿಂಪಡೆದಿದ್ದಾರೆ ಎಂಬಂತೆ ಉಲ್ಲೇಖಿಸಿ ಒಕ್ಕೂಟಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ, ಆದೇಶಿಸಿದ್ದಾರೆ.

ಶಿರಸಿ: ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆಗೆ ಖುದ್ದು ಉಪಸ್ಥಿತರಿಲ್ಲದ ವ್ಯಕ್ತಿಯ ಸಹಿಯನ್ನು ಫೋರ್ಜರಿ ಮಾಡಿ ಚುನಾವಣಾ ನಿಯಮ ಉಲ್ಲಂಘಿಸಿದ ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ (ಎ.ಆರ್) ಅಜೀತ್ ಶಿರಹಟ್ಟಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್. ರವಿ ಎಂಬವರು ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿಯಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ ಹಿಡಿದು ಧರಣಿ ಕೈಗೊಂಡಿದ್ದಾರೆ.

ಹಿರಿಯ ಸಹಕಾರಿ ಪ್ರಮೋದ ಹೆಗಡೆ ಯಲ್ಲಾಪುರ ಅಧ್ಯಕ್ಷರು, ಕೆ.ವಿ. ನಾಯಕ ಅಂಕೋಲಾ ಉಪಾಧ್ಯಕ್ಷರಾಗಿರುವ ೨೦೧೯ರಿಂದ ಅಸ್ತಿತ್ವಕ್ಕೆ ಬಂದ ಈ ಉ.ಕ. ಜಿಲ್ಲಾ ಸಹಕಾರಿ ಒಕ್ಕೂಟದ ೧೯ ನಿರ್ದೇಶಕರ ಹುದ್ದೆಗೆ ಚುನಾವಣೆ ನಡೆಯಬೇಕಿದೆ. 2025ರ ಮಾರ್ಚ್‌ 2ರವರೆಗೆ 19 ಜನ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ನಿಗದಿಯಾಗಿದ್ದ ಮಾ.4ರಂದು ಮಧ್ಯಾಹ್ನ 3 ಗಂಟೆಯ ಒಳಗಾಗಿ 9 ಜನ ಮಾತ್ರ ಖುದ್ದು ಹಾಜರಾಗಿ ನಾಮಪತ್ರ ಹಿಂಪಡೆದಿದ್ದರು. ಆದರೆ ಎ.ಆರ್. ಅಜೀತ್ ಶಿರಹಟ್ಟಿಯವರು ನಾಮಪತ್ರ ಹಿಂಪಡೆಯದ, ಬೆಂಗಳೂರಿನಲ್ಲಿ ಅನಾರೋಗ್ಯದ ನಿಮಿತ್ತ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ ಭಟ್ ಎಂಬವರು ಖುದ್ದು ಉಪಸ್ಥಿತರಿದ್ದು ನಾಮಪತ್ರ ಹಿಂಪಡೆದಿದ್ದಾರೆ ಎಂದು ಪೋರ್ಜರಿ ದಾಖಲೆ ಸೃಷ್ಟಿಸಿ 10 ಜನ ಖುದ್ದು ನಾಮಪತ್ರ ಹಿಂಪಡೆದಿದ್ದಾರೆ ಎಂಬಂತೆ ಉಲ್ಲೇಖಿಸಿ ಒಕ್ಕೂಟಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ, ಆದೇಶಿಸಿದ್ದಾರೆ. ಈ ಮೂಲಕ ಚುನಾವಣಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಸರಸ್ವತಿ ಎನ್.ರವಿ ಆರೋಪಿಸಿದ್ದಾರೆ.

ಮಾ.೫ರಂದು ಬೆಳಿಗ್ಗೆ ೧೦ ಗಂಟೆಗೆ ಶಿರಸಿ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ಅವರನ್ನು ಭೇಟಿ ಮಾಡಿ ನಾಮಪತ್ರ ಹಿಂಪಡೆದವರ ಮಾಹಿತಿಯನ್ನು ಕೇಳಿದಾಗ ೯ ಜನರೊಂದಿಗೆ ಗಣೇಶ ಭಟ್ ಎಂಬವರೂ ನನ್ನ ಎದುರಿಗೆ ಖುದ್ದು ಹಾಜರಾಗಿ ಸಹಿ ಮಾಡಿ ನಾಮಪತ್ರ ಹಿಂಪಡೆದಿದ್ದಾರೆ ಎಂದು ಸುಳ್ಳು ಹೇಳಿದರಲ್ಲದೇ ನೀವು ಏನು ಬೇಕಾದರೂ ಮಾಡಿಕೊಳ್ಳಿ, ನನ್ನ ಅಧಿಕಾರವನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ಗದರಿಸುತ್ತಾ, ನನಗೆ ಮೇಲಿನಿಂದ ಒತ್ತಡ ಇದೆ. ಈ ಕಾರಣಕ್ಕೆ ನಾನು ಹೀಗೆ ಆದೇಶ ಮಾಡಬೇಕಾಯಿತು. ನೀವು ಈ ಬಗ್ಗೆ ತಕರಾರು ಮಾಡಿದರೆ ಮುಂದೆ ನಿಮಗೂ ತೊಂದರೆಯಾಗಬಹುದು ಎಂದು ಧಮಕಿ ಹಾಕಿದ್ದಾರೆ. ಸುಮಾರು ೧೨ ಗಂಟೆಯ ಸುಮಾರಿಗೆ ಕಚೇರಿಯಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿದರು.

ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಈ ರೀತಿ ನಿಯಮ ಉಲ್ಲಂಘನೆ ಮಾಡುವುದು ಮಾಹಿತಿ ಕೇಳಿದರೆ ಧಮಕಿ ಹಾಕುವುದು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಮಾಡಿದ ದೊಡ್ಡ ಅವಮಾನ. ಇದು ಸಹಕಾರಿಗಳನ್ನು ತುಳಿಯುವ ಹುನ್ನಾರವಾಗಿದೆ. ಇಡೀ ಜಿಲ್ಲೆಯ, ರಾಜ್ಯದ ಹಿರಿಯ ಸಹಕಾರಿಗಳು, ಜನ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸರ್ಕಾರದ ಗಮನವನ್ನು ಸೆಳೆಯುವ ಉದ್ದೇಶದಿಂದ ಧರಣಿ ಕೂತಿದ್ದೇನೆ ಎಂದು ಹೇಳಿದರು.