ದೆಹಲಿ ಕೆಂಪುಕೋಟೆ ಬಳಿ ಸ್ಫೋಟ ಪ್ರಕರಣ ಖಂಡಿಸಿ ಪ್ರತಿಭಟನೆ

| Published : Nov 14 2025, 03:00 AM IST

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ ಪ್ರಕರಣ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ ಭವನ, ಮುಂಬೈ ದಾಳಿ, ಉರಿ, ಪುಲ್ವಾಮಾ ಹಾಗೂ ಧರ್ಮದ ಗುರುತು ಖಾತ್ರಿ ಮಾಡಿಕೊಂಡು ಪಹಲ್ಗಾಮದಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲಿನ ದಾಳಿಯಿಂದ ದೇಶದ ಜನರು ಆತಂಕಗೊಂಡಿದ್ದಾರೆ.

ಬಳ್ಳಾರಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭಯೋತ್ಪಾದಕ ದಾಳಿಯ ಹಿಂದಿರುವ ಇಸ್ಲಾಮಿಕ್ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಂಸತ್ ಭವನ, ಮುಂಬೈ ದಾಳಿ, ಉರಿ, ಪುಲ್ವಾಮಾ ಹಾಗೂ ಧರ್ಮದ ಗುರುತು ಖಾತ್ರಿ ಮಾಡಿಕೊಂಡು ಪಹಲ್ಗಾಮದಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲಿನ ದಾಳಿಯಿಂದ ದೇಶದ ಜನರು ಆತಂಕಗೊಂಡಿದ್ದಾರೆ. ಈ ದಾಳಿಗಳ ಆತಂಕ ಮಾಸುವ ಮುನ್ನವೇ ದೆಹಲಿಯ ಕೆಂಪುಕೋಟೆಯ ಬಳಿ ಭಯೋತ್ಪಾದಕ ಸಂಘಟನೆಯ ದುಷ್ಕರ್ಮಿಗಳು ಮತ್ತೊಂದು ದಾಳಿ ನಡೆಸಿದ್ದು ಕೇಂದ್ರ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವವರನ್ನು ಹುಡುಕಾಡಿ ಬೇಟೆಯಾಡಬೇಕು ಎಂದು ಆಗ್ರಹಿಸಿದರು.

ದೆಹಲಿಯ ಕೆಂಪುಕೋಟೆ ಬಳಿಯ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಆರೋಗ್ಯ ಸೇವೆಯನ್ನು ನೀಡಬೇಕಾದವರೇ ದೇಶದ ಗಂಡಾಂತರ ತರುವ ಕೃತ್ಯ ನಡೆಸುತ್ತಿದ್ದಾರೆ. ಭಯೋತ್ಪಾದಕರು ಭಾರತದ ಪ್ರಮುಖ ದೇವಸ್ಥಾನಗಳು ಹಾಗೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣ ಸೇರಿದಂತೆ ಭಯೋತ್ಪಾದಕ ಕೃತ್ಯದಲ್ಲಿ ಹಿಂದಿರುವ ಎಲ್ಲರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ಧಾರ್ಮಿಕತೆಯ ಸೋಗಿನಲ್ಲಿ ದೇಶ ಒಡೆಯುವ ವಿಚಾರಗಳನ್ನು ಬಿತ್ತುತ್ತಿರುವ ಮದರಸಾ ವ್ಯವಸ್ಥೆಯನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಕಳುಹಿಸಿದರು. ಸಂಘಟನೆಯ ಉತ್ತರ ಪ್ರಾಂತ ಸದಸ್ಯ ಶ್ರೀರಾಮಲು, ಮುಲ್ಲಂಗಿ ಕಿಶೋರ್ ಕುಮಾರ್, ಎರಿಸ್ವಾಮಿ, ಭರತ್ ಸೋನಿ, ಮನೋಜ್ ಕುಮಾರ್, ಗೋವಿಂದ ನಾಯಕ, ಅಮರೇಶ ಸೇರಿದಂತೆ ಸಂಘಟನೆಯ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭಯೋತ್ಪಾದಕ ದಾಳಿ ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬಳ್ಳಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.