ಹೊಸಕೋಟೆ: ನಗರದ ತಾಲೂಕು ಕಚೇರಿ ಆವರಣದಲ್ಲಿ ಸಿಐಟಿಯು ಮತ್ತು ಮೇಡ್ರಿಚ್, ಓಲ್ವೋ, ಆಟೋಲೀವ್ ಕಾರ್ಮಿಕ ಯೂನಿಯನ್ ಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳ ಗೆಜೆಟ್ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮುಂದಿನ ದಿನಗಳಲ್ಲಿ ಬೀದಿ ಬೀದಿಗಳಲ್ಲಿ ಹರಿಯಾಣ ಮತ್ತು ಉತ್ತರಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕಾರ್ಮಿಕ ಮುಖಂಡರು ಎಚ್ಚರಿಸಿ, ಶಿರಸ್ತೆದಾರ ರಾಜುಗೌಡರಿಗೆ ಕೂಡಲೇ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಸಿಐಯುಟಿಯು ತಾಲೂಕು ಖಜಾಂಚಿ ವೆಂಕಟರಾಜು ಮಾತನಾಡಿ, ಕೇಂದ್ರ ಸರ್ಕಾರ ಪಂಚರಾಜ್ಯಗಳ ಚುನಾವಣೆ ಇದ್ದ ಕಾರಣಕ್ಕೆ ಕಾರ್ಮಿಕ ಮರಣ ಶಾಸನಗಳಾಗಿರುವ 4 ಸಂಹಿತೆಗಳನ್ನು ಜಾರಿಗೊಳಿಸಿರಿಲಿಲ್ಲ. ಈಗ ಬಂಡವಾಳ ಶಾಹಿಗಳ ಓಲೈಕೆಗಾಗಿ ಏಕಾಏಕಿ ಮೇ ೮ರಂದು ಗೆಜೆಟ್ ಮಾಡಿ ಕಾರ್ಮಿಕರ ಬದುಕಿನ ಅಸ್ತಿತ್ವದ ಬುಡಕ್ಕೆ ಕೈಹಾಕಿದ್ದಾರೆ. ಇದು ದೇಶದ ಶ್ರಮಿಕವರ್ಗಕ್ಕೆ ಬದುಕುವ ಸ್ವಾತಂತ್ರ‍್ಯ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೋಲ್ವೋ ಬಸ್‌ ಯೂನಿಯನ್ ಮುಖಂಡ ಆನಂದ್ ಮಾತನಾಡಿ, ದೇಶದಲ್ಲಿಂದು ಬಿಇ ಮಾಡಿರುವ ಶೇ.84, ಎಂಬಿಎ ಶೇ.74 ಯುವಕರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಂಡವಾಳಶಾಹಿ ಪರ ತಾಳುತ್ತಿರುವ ಧೋರಣೆಗಳು. ಕೇಂದ್ರ ಜಾರಿಗೊಳಿಸಿರುವ 4 ಕಾರ್ಮಿಕ ಸಂಹಿತೆಗಳು ರೈತರು, ಕಾರ್ಮಿಕರನ್ನು ನವ ಗುಲಾಮಶಾಹಿತ್ವಕ್ಕೆ ತಳ್ಳುತ್ತಿವೆ. ಅಂದರೆ ಇನ್ನು ಮುಂದೆ ಕಾರ್ಮಿಕರಿಗೆ ಕಾಯಂ ನೇಮಕಾತಿ ಇರುವುದಿಲ್ಲ, ಮಹಿಳೆಯರು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬೇಕಾಗುತ್ತದೆ, 8 ಗಂಟೆಗೆ ಬದಲಿಯಾಗಿ 10-12 ಗಂಟೆ ಕೆಲಸ ಮಾಡಬೇಕಾಗುತ್ತದೆ. ಸಾಂವಿಧಾನಿಕವಾಗಿ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮೆಡ್ರಿಚ್ ಕಂಪನಿಯ ಕಾರ್ಮಿಕ ಮುಖಂಡ ಸುಬ್ರಹ್ಮಣಿ, ಆಟೋ ಲಿವ್ ಕಂಪನಿ ಕಾರ್ಮಿಕ ಮುಖಂಡ ವಿರೇಶ್, ವಿವಿಧ ಕಂಪನಿಗಳ ಕಾರ್ಮಿಕರು ಪಾಲ್ಗೊಂಡಿದ್ದರು.

ಕೋಟ್ ............

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಬಾರದು ಎಂದು ಹೇಳುತ್ತವೆಯೇ ಹೊರತು ಅದೇ ಸುಪ್ರೀಂಕೋರ್ಟ್ ಆದೇಶಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನ ಆದೇಶವನ್ನು ಏಕೆ ಪಾಲಿಸುತ್ತಿಲ್ಲ. ಸರ್ಕಾರಗಳಿಗೊಂದು ಕಾರ್ಮಿಕರಿಗೊಂದು ನಿಯಮ ಇದೆಯಾ?


-ಆನಂದ್, ವೋಲ್ವೋ ಬಸ್‌ ಯೂನಿಯನ್ ಮುಖಂಡ, ಹೊಸಕೋಟೆ

ಫೋಟೋ: 18 ಹೆಚ್‌ಎಸ್‌ಕೆ 1

ಹೊಸಕೋಟೆಯ ತಾಲೂಕು ಕಚೇರಿ ಆವರಣದಲ್ಲಿ ಸಿಐಟಿಯು ಮತ್ತು ಮೇಡ್ರಿಚ್, ವೋಲ್ವೋ, ಆಟೋಲೀವ್ ಕಾರ್ಮಿಕ ಯೂನಿಯನ್ ಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.