ನ್ಯಾ. ನಾಗಮೋಹನ್‌ ದಾಸ್‌ ವರದಿ ಅನುಷ್ಠಾನ ಖಂಡಿಸಿ ಪ್ರತಿಭಟನೆ

| Published : Aug 21 2025, 02:00 AM IST

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ನ್ಯಾ. ನಾಗಮೋಹನ ದಾಸ್‌ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವುದನ್ನು ವಿರೋಧಿಸಿ ಲಂಬಾಣಿ, ಬೋವಿ, ಕೊರಚ, ಕೊರಮ ಸಮುದಾಯಗಳಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಲಂಬಾಣಿ, ಬೋವಿ, ಕೊರಚ, ಕೊರಮ ಸಮುದಾಯಗಳಿಂದ ವಿರೋಧ

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ಹೊಸಪೇಟೆ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ನ್ಯಾ. ನಾಗಮೋಹನ ದಾಸ್‌ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವುದನ್ನು ವಿರೋಧಿಸಿ ಲಂಬಾಣಿ, ಬೋವಿ, ಕೊರಚ, ಕೊರಮ ಸಮುದಾಯಗಳಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಮಹರ್ಷಿ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಬಸ್‌ ನಿಲ್ದಾಣ, ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಭಾರೀ ಪ್ರತಿಭಟನೆಯಾಗಿ ಮಾರ್ಪಟ್ಟಿತು.

ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್‌ ಸ್ವಾಮೀಜಿ ಮಾತನಾಡಿ, ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿಗೆ ಈ ವರದಿ ಅನುಷ್ಠಾನದಿಂದ ಘೋರ ಅನ್ಯಾಯ ಆಗಿದೆ. ಕೂಲಿ ಮಾಡಿ, ಗುಳೆ ಹೋಗಿ ಬದುಕುವ ಬಂಜಾರ ಸಮಾಜಕ್ಕೆ ಈ ವರದಿ ಅನುಷ್ಠಾನ ಭಾರೀ ಪೆಟ್ಟು ನೀಡಿದೆ. ಇನ್ನೂ ಕೊರಚ, ಕೊರಮ, ಬೋವಿ ಸಮುದಾಯಗಳ ಸ್ಥಿತಿಯೂ ಭಿನ್ನವಾಗಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರದಿ ಅನುಷ್ಠಾನ ಮಾಡದೇ, ಈ ಸಮುದಾಯಗಳ ನಡುವೆ ಒಗ್ಗಟ್ಟು ಮೂಡಿಸಬೇಕಿತ್ತು ಎಂದರು.

ಈಗ ರಾಜ್ಯ ಸರ್ಕಾರ ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯಕ್ಕೆ ಶೇ.6 ಮತ್ತು ಬಂಜಾರ, ಬೋವಿ, ಕೊರಚ, ಕೊರಮ, ಅಲೆಮಾರಿ ಸೇರಿದಂತೆ ಇತರೆ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಒದಗಿಸಿದೆ. ಬಂಜಾರ ಸಮುದಾಯ ತೀರಾ ಹಿಂದುಳಿದಿದೆ. ಅಲೆಮಾರಿ ಸಮುದಾಯಗಳ 59 ಸಮುದಾಯಗಳು, ಬುಡ್ಗ ಜಂಗಮ, ಬೇಡ ಜಂಗಮ ಕೂಡ ಶೇ.5ರ ಪಟ್ಟಿಯಲ್ಲೇ ಸೇರಿಸಲಾಗಿದೆ. 65 ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಒದಗಿಸಿರುವುದು ಸರಿಯಲ್ಲ. ಈ ಹಿಂದಿನ ಬೊಮ್ಮಾಯಿ ಸರ್ಕಾರ ಮಾಧುಸ್ವಾಮಿ ವರದಿಯಂತೆ ಶೇ. 4.5ರಷ್ಟು ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿಗೆ ಹಂಚಿಕೆ ಮಾಡಿತ್ತು. ಈಗ ಬೇಡ, ಬುಡ್ಗ ಜಂಗಮ ಸೇರಿದಂತೆ 59 ಅಲೆಮಾರಿ ಸಮುದಾಯಗಳನ್ನು ಸೇರ್ಪಡೆಗೊಳಿಸಿ ಶೇ. 5ರಷ್ಟು ಮಾತ್ರ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದರಿಂದ ಲಂಬಾಣಿ ಸೇರಿದಂತೆ ನಮ್ಮ ಸಹೋದರ ಸಮುದಾಯಗಳಿಗೆ ಭಾರೀ ಅನ್ಯಾಯ ಆಗಿದೆ. ಈ ವರದಿ ಅನುಷ್ಠಾನವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆಯಬೇಕು. ಇನ್ನೂ ಬರೀ ಒಂದು ತಿಂಗಳ ಅಂತರದಲ್ಲೇ ತರಾತುರಿಯಲ್ಲಿ ಜಾತಿ ಸಮೀಕ್ಷೆ ಮಾಡಲಾಗಿದೆ. ವಲಸೆ ಹೋದವರನ್ನೂ ಪರಿಗಣಿಸಲಾಗಿಲ್ಲ. ಗೊಂದಲದ ಗೂಡಾಗಿದ್ದ ವರದಿಯನ್ನೇ ಅನುಷ್ಠಾನ ಮಾಡಿ ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದರು.

ತಲೆ ಬೋಳಿಸಿಕೊಂಡು ಪ್ರತಿಭಟನೆ:

ನಗರದ ಬಸ್‌ ನಿಲ್ದಾಣದ ಎದುರು ಸಂಚಾರ ತಡೆ ನಡೆಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಬಳಿಕ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಇಬ್ಬರು ಪ್ರತಿಭಟನಾಕಾರರು ತಲೆ ಬೋಳಿಸಿಕೊಂಡು ಪ್ರತಿಭಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪೋಸ್ಟರ್‌ ಹಿಡಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಕೂಡ ನಡೆಯಿತು. ಬಳಿಕ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ದೂಪದಹಳ್ಳಿಯ ಶಿವಪ್ರಕಾಶ ಮಹಾರಾಜ, ಸಂಡೂರಿನ ತಿಪ್ಪೇಸ್ವಾಮಿ, ಮಂಜುನಾಥ ಸ್ವಾಮಿ, ಗೋಸಾಯಿ ಬಾಬಾ, ಮುಖಂಡರಾದ ಪಿ.ಎಚ್‌. ದೊಡ್ಡ ರಾಮಣ್ಣ, ಡಿ. ಲಾಲ್ಯಾ ನಾಯ್ಕ, ರಾಮಜೀ ನಾಯ್ಕ, ಹೀರಿಯಾ ನಾಯ್ಕ, ಅಮಾಜಿ ಹೇಮಣ್ಣ, ಅಂಜಿನಿ, ತಿಪ್ಪೇಸ್ವಾಮಿ, ವಿನಾಯಕ ಭಜಂತ್ರಿ, ಹುಲುಗಪ್ಪ, ಶಿವು ನಾಯ್ಕ, ಮೋದಿ ಹನುಮ ನಾಯ್ಕ, ಕುಮಾರ ನಾಯ್ಕ, ಲಿಂಬ್ಯಾ ನಾಯ್ಕ, ರಾಮು ನಾಯ್ಕ, ರವೀಂದ್ರ ನಾಯ್ಕ, ಕಾಶಿನಾಥ ನಾಯ್ಕ, ಸುಭಾಷ್‌ ನಾಯ್ಕ, ಶಾಮಾ ನಾಯ್ಕ, ಪ್ರಕಾಶ ನಾಯ್ಕ, ಪವಿತ್ರಾಬಾಯಿ, ಡಿ. ಶಿಲ್ಪಾ ನಾಯ್ಕ, ವೀರ ಸಿಂಗ ನಾಯ್ಕ, ಚೇತನ್‌ ನಾಯ್ಕ, ಮಣಿಕಂಠ, ಸೋಮು, ಗೋವಿಂದ ನಾಯ್ಕ, ರಘು ನಾಯ್ಕ ಮತ್ತಿತರರಿದ್ದರು. ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಡಿವೈಎಸ್ಪಿ ಡಾ. ಮಂಜುನಾಥ ತಳವಾರ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದರು.