ಉಡುಪಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳ‍ನ ಮಾಡಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ಯುವ ಕಾಂಗ್ರೆಸ್ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇದೇ ಸಂದರ್ಭ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಮತ್ತು ಶಾಸಕರ ಪರ ಘೋಷಣೆಗಳನ್ನು ಕೂಗಿ, ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಕೆಲವೇ ಮೀಟರ್ ಅಂತರದಲ್ಲಿ ಜಮಾಯಿಸಿದ್ದ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಸಂಖ್ಯೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯ ಅಂಗವಾಗಿ ಉಡುಪಿ ತಾ.ಪಂ. ಆವರಣದಲ್ಲಿರುವ ಗುರುವಾರ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಅವಕಾಶ ನಿರಾಕರಿಸಿದ್ದರಿಂದ, ಮುತ್ತಿಗೆ ಕಾರ್ಯಕ್ರಮವನ್ನು ಬಿಟ್ಟು, ಅನತಿ ದೂರದಲ್ಲಿರುವ ಜೋಡುಕಟ್ಟೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರ ಕಚೇರಿಯತ್ತ ತೆರಳಿದ ಏಳೆಂಟು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವ ಮಾಹಿತಿ ಪಡೆದ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ, ಕಚೇರಿ ಮುಂದೆ ಜಮಾಯಿಸಿ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

ನಂತರ ಪೊಲೀಸರು ಎರಡೂ ಕಡೆಯ ಕಾರ್ಯಕರ್ತರ ಮನವೊಲಿಸಿ , ಅವರನ್ನು ಸ್ಥಳದಿಂದ ತೆರವುಗೊಳಿಸಿದರು.


ಇಂದು ಕಾಂಗ್ರೆಸ್ ಪ್ರತಿಭಟನೆ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದೆ. ಈಗಾಗಲೇ ಕಾಂಗ್ರೆಸ್ ನಾಯಕರ ದೂರಿನಂತೆ, ಉಡುಪಿ ಶಾಸಕರು ರಾಹುಲ್‌ ಗಾಂಧಿಯನ್ನು ಅವಹೇಳನ ಮಾಡಿದ್ದಾರೆ ಮತ್ತು ದ್ವೇಷ ಭಾಷಣ ಮಾಡಿದ್ದಾರೆ ಎಂದು ಉಡುಪಿ ನಗರ, ಕೊಟ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.