ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಹಿಂದುತ್ವದ ಸಂಕೇತದಂತಿರುವ ಬಿಜೆಪಿಯನ್ನು ಅಪ್ಪ ಮಕ್ಕಳು ಸೇರಿ ಮುಗಿಸಲು ಹೊರಟಿದ್ದಾರೆ. ಅವರ ವಿರುದ್ಧ ಧ್ವನಿ ಎತ್ತಿದ ಯತ್ನಾಳರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಸರಿಯಲ್ಲ. ಹೈ ಕಮಾಂಡ್ ಗೌರವಯುತವಾಗಿ ಯತ್ನಾಳರನ್ನು ಮರು ಸೇರ್ಪಡೆ ಮಾಡಿಕೊಳ್ಳಬೇಕೆಂದು ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಸಂಚಾಲಕ ರಾಘವ ಅಣ್ಣಿಗೇರಿ ಒತ್ತಾಯಿಸಿದರು.ಯತ್ನಾಳ ಉಚ್ಚಾಟಿಸಿರುವುದನ್ನು ಖಂಡಿಸಿ ಹಿಂದು ಸಂಘಟನೆಗಳ ಮುಖಂಡರು ತಾಳಿಕೋಟೆ ಪಟ್ಟಣದಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ನಮಗೆ ಜಾತಿ, ಧರ್ಮಕ್ಕಿಂತ ದೇಶವೇ ಮುಖ್ಯ. ದೇಶದಲ್ಲಿ ಹಿಂದು ಕಾರ್ಯಕರ್ತರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ಆದರೆ ಯಡಿಯೂರಪ್ಪ ದೇಶ ಮತ್ತು ಧರ್ಮಕ್ಕಿಂತ ಕುಟುಂಬವೇ ಮುಖ್ಯವೆಂದು ಹೊರಟಿದೆ. ಮಾಜಿ ಶಾಸಕ ನಡಹಳ್ಳಿಗೆ ಏನು ಮರ್ಯಾದೆ ಇದೆ? ನಿಮ್ಮ ಮೋಸಕ್ಕೆ ಜನರು ಬಲಿಯಾಗದೇ ನಿಮ್ಮನ್ನು ಮಾಜಿಯನ್ನಾಗಿ ಮಾಡಿದ್ದಾರೆ. ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದ ಯತ್ನಾಳ ಅವರ ಬೆನ್ನಿಗೆ ಹಿಂದು ಕಾರ್ಯಕರ್ತರು ನಿಲ್ಲುತ್ತೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಸಮಯದಲ್ಲಿ ಬಿಜೆಪಿ ಮುಖ್ಯ ಘಟ್ಟದಲ್ಲಿ ಯತ್ನಾಳ ಕೂಡ ಇರಲಿದ್ದಾರೆಂದು ಭವಿಷ್ಯ ನುಡಿದರು.
ಬಿಜೆಪಿ ಹೈ ಕಮಾಂಡ್ ರಾಜ್ಯಾದ್ಯಂತ ಯತ್ನಾಳ ಅಭಿಮಾನಿಗಳ ಹೋರಾಟವನ್ನು ನೋಡುತ್ತಿದೆ. ಯಾರಿಗೆ ಯಾರು ಹೋರಾಟ ಮಾಡುವಂತೆ ಹೇಳಿಲ್ಲ. ಮಾಜಿ ಶಾಸಕ ತಮ್ಮ ರಕ್ಷಣೆಗಾಗಿ ಪೊಲೀಸ್ ರಕ್ಷಣೆ ಕೋರಿದ್ದಾರಂತೆ ನಿಮಗೆ ಯಾರು ಹೊಡೆಯುತ್ತಾರೆ. ಕೆಲವು ಸ್ವಯಂ ಘೋಷಿತ ನಾಯಕರಿಗೆ ಹೇಳುತ್ತೇನೆ. ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಪಾಸಾಗುತ್ತಿದೆ. ಕರ್ನಾಟಕದ ಮಠ ಮಂದಿರಗಳು, ರೈತರ ಸಾಮಾನ್ಯ ಜಮೀನನ್ನು ಜಿಹಾದಿ ವಕ್ಫ್ ಹೊಡೆಯಲು ಮುಂದಾಗಿದ್ದರು. ಅದನ್ನು ಉಳಿಸಲು ಮೊದಲು ಧ್ವನಿ ಎತ್ತಿದವರು ಬಸನಗೌಡ ಪಾಟೀಲ ಯತ್ನಾಳರು ಎಂದರು.ಜಿಪಂ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಯತ್ನಾಳರು ಒಬ್ಬ ವ್ಯಕ್ತಿಯಲ್ಲಾ ಹಿಂದೂ ಸಮಾಜದ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಇತ್ತೀಚೆಗೆ ಬಿಜೆಪಿ ಕೆಲವು ನಾಯಕರು ಹಿಂದುತ್ವ ಎಂದು ಬಂದವರನ್ನು ಮೊದಲು ಮಣ್ಣು ಮಾಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಳವಿನಂಚಿಗೆ ಬರಲು ಕಾರಣವಾಗಿದೆ ಎಂದು ಕಿಡಿ ಕಾರಿದರು.
ಪಟ್ಟಣದ ರಾಜವಾಡೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದಲ್ಲಿ ಭಹಿರಂಗ ಸಭೆ ನಡೆಸಲಾಯಿತು. ಈ ವೇಳೆ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಡಾ.ಬಿ.ಎಸ್.ಪಾಟೀಲ, ಮಡುಸಾಹುಕಾರ ಬಿರಾದಾರ, ಕಿತ್ತೂರ ರಾಣಿ ಚನ್ನಮ್ಮ ಸಂಘದ ಜಿಲ್ಲಾಧ್ಯಕ್ಷೆ ಅಶ್ವೀನಿ ಬಿರಾದಾರ ಸೇರಿದಂತೆ ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿಂದು ಸಂಘಟನೆಗಳ ಕಾರ್ಯಕರ್ತರು, ಯತ್ನಾಳ ಅಭಿಮಾನಿಗಳು ಭಾಗವಹಿಸಿದ್ದರು.