ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಭಂಟನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯ ಸಿಬ್ಬಂದಿ ನಿಯೋಜಿಸಿದ್ದರೂ ಕೂಡಾ ಯಾರೂ ಒಬ್ಬರು ಬರುತ್ತಿಲ್ಲ. ಭಂಟನೂರ ಗ್ರಾಮ ಒಳಗೊಂಡು ಹತ್ತಾರು ಗ್ರಾಮಗಳ ಬಡಜನಿರಿಗೆ ತೊಂದರೆಯಾಗುತ್ತಿದೆ ಎಂದು ಭಂಟನೂರ ಗ್ರಾಮದ ಜನರು ಗುರುವಾರ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ಗ್ರಾಮದ ಮುಖಂಡ ಸಿವರೆಡ್ಡಿ ಐನಾಪೂರ ಮಾತನಾಡಿ, ಸರ್ಕಾರದ ಸುಪರ್ದಿಯಲ್ಲಿದ್ದ ಈ ಭಂಟನೂರ ಆರೋಗ್ಯ ಕೇಂದ್ರವನ್ನು ಎನ್‌ಜಿಒ ಮೂಲಕ ನಡೆಸಲಾಗುತ್ತಿಲ್ಲ. ಸುಮಾರು ೫, ೬ ವರ್ಷಗಳ ಕಾಲ ವೈದ್ಯ ಸಿಬ್ಬಂದಿ ನಿಗದಿತ ಸಮಯವಿಲ್ಲದೇ ಮನಸ್ಸಿಚ್ಚೆಯಂತೆ ಬಂದು ಹೋಗುತ್ತಿದ್ದರು. ಆದರೆ, ಮಾರ್ಚ್‌ ಅಂತ್ಯಕ್ಕೆ ಎನ್‌ಜಿಒ ಅವಧಿ ಮುಗಿದಿದ್ದರಿಂದ ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಆದೇಶದಂತೆ ತಾಲೂಕು ಆರೋಗ್ಯ ಅಧಿಕಾರಿಗಳು ಏ.೨೭ ರಂದೇ ೫ ಜನ ವೈದ್ಯ ಸಿಬ್ಬಂದಿಯನ್ನು ನೇಮಿಸಿ ಆದೇಶಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಒಬ್ಬ ವೈದ್ಯರು ಸಿಬ್ಬಂದಿ ಬಂದಿಲ್ಲ. ಇದರಿಂದ ಇಲ್ಲಿಯ ಜನರಿಗೆ ತುಂಬಾ ತೊಂದರೆಯಾಗುವುದರ ಜೊತೆಗೆ ಸುಮಾರು ೧೫ ಕಿಮೀ ಅಂತರದ ತಾಳಿಕೋಟೆ ಪಟ್ಟಣಕ್ಕೆ ಹೋಗಿಬರುವಂತಹ ದುಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೇ ಇಡೀ ತಾಲೂಕಿನಲ್ಲಿಯೇ ಮಾದರಿಯ ಆರೋಗ್ಯ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಸದ್ಯ ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರವು ಬೀಕಾರಿ ಆರೋಗ್ಯ ಕೇಂದ್ರವೆಂಬಂತಾಗಿದೆ. ಜನರಿಗೆ ಚಿಕಿತ್ಸೆ ನೀಡಬೇಕಾದ ಆರೋಗ್ಯ ಕೇಂದ್ರವೇ ಚಿಕಿತ್ಸೆಗೆ ಬಂದಂತಾಗಿದೆ. ಆರೋಗ್ಯ ಕೇಂದ್ರವು ದನದ ಕೊಂಡಡಿಯಂತಾಗಿದೆ. ಆರೋಗ್ಯ ಕೇಂದ್ರದಲ್ಲಿ ಕಸ ತುಂಬಿಕೊಂಡಿದೆ. ಬೇಡ್ ಮೇಲೆ ಸಲೈನ್ ಬಾಟಲಿ, ಔಷಧಗಳು ಹಾಗೆ ಬಿದ್ದಿವೆ. ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈ ಗತಿ ಬಂದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸದಿರುವುದು ಒಳಗುಟ್ಟೇನೆಂಬುವುದು ತಿಳಿಯದಂತಾಗಿದೆ ಎಂದು ಆರೋಪಿಸಿದರು.

ಈ ಸಮಯದಲ್ಲಿ ಗ್ರಾಮದ ಮುಖಂಡರುಗಳಾದ ರಾಮನಗೌಡ ಐನಾಪೂರ, ಡಾ.ಭಲವಂತ್ರಾಯ ನಡಹಳ್ಳಿ, ಸಾಹೇಬಗೌಡ ಸಾಸನೂರ, ಶಿವರೆಡ್ಡಿ ಐನಾಪೂರ, ಬಸವರಾಜ ತಳವಾರ, ಪ್ರಭುಗೌಡ ನಡಹಳ್ಳಿ, ಶಿವನಗೌಡ ಸಾಸನೂರ, ಶೇಂಕ್ರೆಪ್ಪ ಈಳಗೇರ, ಶ್ರೀಶೈಲ ಹಡಪದ, ಹಾಗೂ ಮಹಿಳೆಯರಾದ ಶ್ರೀಮತಿ ಲಕ್ಷ್ಮೀಬಾಯಿ ಬಳಬಟ್ಟಿ, ಶಾಂತಮ್ಮ ಸೂಡಗಿ, ಲಕ್ಷ್ಮೀಬಾಯಿ ಬಸರೆಡ್ಡಿ, ಗಂಗಮ್ಮ ಸಾಸನೂರ, ಗಂಗಮ್ಮ ಐನಾಪೂರ, ಬೋರಮ್ಮ ಬಿಂಜಲಭಾವಿ, ಮಹಾದೇವಿ ಭಜಂತ್ರಿ, ಕನಕಮ್ಮ ಯಾಳಗಿ, ಒಳಗೊಂಡು ನೂರಾರು ಜನರು ಇದ್ದರು.