ಪರಿಷ್ಕೃತ ಕನಿಷ್ಠ ವೇತನ ಜಾರಿ, ಪಿಎಫ್‌-ಇಎಸ್‌ಐ ಕಂತನ್ನು ಕೃಷಿ ವಿವಿ ಕಟ್ಟುವುದು, ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಅರ್ಹರಿಗೆ ನೇಮಕಾತಿ ಮಾಡಬೇಕೆಂದು ಕೃಷಿ ವಿಶ್ವವಿದ್ಯಾಲಯ ಹಂಗಾಮಿ ನೌಕರರ ಸಂಘ ಪ್ರತಿಭಟನೆ ನಡೆಸಿತು.

ಧಾರವಾಡ:

ಪರಿಷ್ಕೃತ ಕನಿಷ್ಠ ವೇತನ ಜಾರಿ, ಪಿಎಫ್‌-ಇಎಸ್‌ಐ ಕಂತನ್ನು ಕೃಷಿ ವಿವಿ ಕಟ್ಟುವುದು, ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಅರ್ಹರಿಗೆ ನೇಮಕಾತಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಗುರುವಾರ ಕೃಷಿ ವಿಶ್ವವಿದ್ಯಾಲಯ ಹಂಗಾಮಿ ನೌಕರರ ಸಂಘದ ನೇತೃತ್ವದಲ್ಲಿ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಈ ವರೆಗೂ ಜಾರಿಗೆ ತರದಿರುವ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಅರ್ಹರನ್ನು ಗುತ್ತಿಗೆ ನೌಕರರನ್ನು ಡಿಆರ್‌ಇಗಳನ್ನಾಗಿ ಅಧಿಕೃತವಾಗಿ ನೇಮಿಸಿಕೊಳ್ಳಬೇಕು. ಪರಿಷ್ಕೃತ ಗುತ್ತಿಗೆ ಪದ್ಧತಿ ನಿಯಮಾನುಸಾರ ಜಾರಿ ಮಾಡಬೇಕು. ಮತ್ತೆ ತಟಸ್ಥಗೊಂಡಿರುವ ಕೇಂದ್ರಿಕೃತ ಗುತ್ತಿಗೆ ವಹಿಸುವ ಪದ್ಧತಿಯ ಬದಲು ಒಂದೊಂದು ಕೃಷಿ ಉತ್ಪನ್ನ ಪ್ರಕ್ರಿಯೆಗಳಲ್ಲಿ ಮತ್ತು ಪೀಕ್ ಸಿಜನ್‌ಗಳಲ್ಲಿ ಮಾತ್ರವೇ ಅಗತ್ಯ ಬೀಳಬಹುದಾದಷ್ಟು ಕೃಷಿ ಕಾರ್ಮಿಕರನ್ನು ಅಗತ್ಯಕ್ಕೆ ತಕ್ಕಂತೆ ಮತ್ತು ಗುಂಪು ಗುಂಪಾಗಿ ನಿರ್ದಿಷ್ಟ ತುರ್ತು ಕೆಲಸ ಕಾರ್ಯಗಳನ್ನು ನಿರ್ಧರಿಸಬೇಕು ಎಂದು ಆಗ್ರಹಿಸಲಾಯಿತು.

ಕುಲಪತಿ ಡಾ. ಬಿ.ಎನ್. ಪ್ರಕಾಶ್ ನೇತೃತ್ವದ ಉನ್ನತಾಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕುಲಪತಿ, ಬಾಕಿ ವೇತನ ಬಿಡುಗಡೆ, ಬಾಕಿ ಪಿಎಫ್‌, ಇಎಸ್‌ಐ ಕಂತನ್ನು ವಿವಿ ತುಂಬಲು ಹಾಗೂ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ನೇಮಕಾತಿಗೆ ಇರುವ ಪ್ರಕ್ರಿಯೆ ಪ್ರಾರಂಭಿಸುವ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಬಿ.ಎಸ್. ಸೊಪ್ಪಿನ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಮುಖಂಡರಾದ ಲಕ್ಷ್ಮಣ ಅವರಾದಿ, ವೀರೇಶ ಗುಡ್ಡದಮಠ, ಬಸು ಕುರಬೆಟ್ಟ, ಬಸವರಾಜ ಭುಜಂಗನವರ, ರಾಜು ರುದ್ರಾಪೂರ, ನೀಲವ್ವ ಬಾಳಿಕಾಯಿ ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.