ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಧರಣಿ ಆರಂಭ

| Published : Nov 16 2025, 02:30 AM IST

ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಧರಣಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ವಿವಿಧ ರೈತಪರ ವೇದಿಕೆಯಲ್ಲಿ ಆಶ್ರಯದಲ್ಲಿ ಲಕ್ಷ್ಮೇಶ್ವರ ತಾಲೂಕಿನ ರೈತರು ಶನಿವಾರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಅಹೋರಾತ್ರಿ ಧರಣಿ ಆರಂಭಿಸಿದರು.

ಲಕ್ಷ್ಮೇಶ್ವರ: ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ವಿವಿಧ ರೈತಪರ ವೇದಿಕೆಯಲ್ಲಿ ಆಶ್ರಯದಲ್ಲಿ ತಾಲೂಕಿನ ರೈತರು ಶನಿವಾರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಅಹೋರಾತ್ರಿ ಧರಣಿ ಆರಂಭಿಸಿದರು.

ಪಟ್ಟಣದ ಸೋಮೇಶ್ವರ ದೇವಾಲಯದಿಂದ ಆರಂಭವಾದ ರೈತರು ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶಿಗ್ಲಿ ಕ್ರಾಸ್ ಬಳಿ ಹಾಕಿದ ವೇದಿಕೆಗೆ ಆಗಮಿಸಿದರು.

ಈ‌ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಎಂ.ಎಸ್. ದೊಡ್ಡಗೌಡರ ಮಾತನಾಡಿ, ರೈತರು ಮುಂಗಾರು ಹಂಗಾಮಿನ ಹೆಸರು, ಶೇಂಗಾ, ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿ ಹೋಗಿವೆ. ತಾಲೂಕಿನಲ್ಲಿ ಈ ವರ್ಷ ಅತಿ ಹೆಚ್ಚು ಬೆಳೆದಿರುವ ಗೋವಿನ ಜೋಳವನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಲು ನಿರ್ಧರಿಸಿದೆ. ಆದರೆ ಇದುವರೆಗೂ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಗೋವಿನ ಜೋಳವನ್ನು ದಲ್ಲಾಳಿಗಳಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.ರೈತರು ಹೊಟ್ಟೆ ಬಟ್ಟೆ ಕಟ್ಟಿ ಬೆಳೆದಿರುವ ಬೆಳೆಗೆ ಯೋಗ್ಯ ಬೆಲೆ ನೀಡಿ ಸರ್ಕಾರ ಖರೀದಿಸಬೇಕು. ಬೆಂಬಲ ಬೆಲೆ ಖರೀದಿ ಆರಂಭವಾಗುವ ವರೆಗೆ ರೈತರು ತಮ್ಮ ಹೋರಾಟ ಹಿಂದಕ್ಕೆ ಪಡೆಯುವುದಿಲ್ಲ. ಸರ್ಕಾರ ಶೀಘ್ರವೇ ಖರೀದಿ ಕೇಂದ್ರ ಆರಂಭಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯವನ್ನು ರೈತರು ಮಾಡಲಿದ್ದಾರೆ ಎಂದು ಹೇಳಿದರು.

ಈ ವೇಳೆ ರೈತ ಸಂಘಟನೆಯ ಮಹಿಳಾ ಅಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಎಷ್ಟು ಹರಸಾಹಸ ಪಡಬೇಕಾಗಿದೆ ಎಂಬುದು ನೋವಿನ ಸಂಗತಿಯಾಗಿದೆ‌‌. ರೈತರು ತಾವು ಬೆಳೆದ ಗೋವಿನ ಜೋಳವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸರ್ಕಾರ ಖರೀದಿಸಬೇಕು. ಶೀಘ್ರದಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.