ಬೀಡಿ ಕಾರ್ಮಿಕರು, ಕೂಲಿ ಕಾರ್ಮಿಕರಿಂದ ಪ್ರತಿಭಟನೆ

| Published : Jan 21 2025, 12:32 AM IST

ಸಾರಾಂಶ

ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಬಡವರಿಗೆ ನಿವೇಶನ ನೀಡಿ ಮನೆಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ ಒದಗಿಸುವಂತೆ ಒತ್ತಾಯಿಸಿ ಬೀಡಿ ಕಾರ್ಮಿಕರು ಹಾಗೂ ಪ್ರಾಂತ ಕೃಷಿ ಕೂಲಿಕಾರರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಬಡವರಿಗೆ ನಿವೇಶನ ನೀಡಿ ಮನೆಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ ಒದಗಿಸುವಂತೆ ಒತ್ತಾಯಿಸಿ ಬೀಡಿ ಕಾರ್ಮಿಕರು ಹಾಗೂ ಪ್ರಾಂತ ಕೃಷಿ ಕೂಲಿಕಾರರು ಪ್ರತಿಭಟನೆ ನಡೆಸಿದರು.

ನಗರಸಭೆ ಮುಂದೆ ಸೇರಿದ ಬೀಡಿ ಕಾರ್ಮಿಕರು ಹಾಗೂ ಕೂಲಿಕಾರರು ಸರ್ಕಾರ, ನಗರಸಭೆ ವಿರುದ್ಧ ಘೋಷಣೆ ಕೂಗಿದರು. ನಂತರ ನಗರಸಭಾಧ್ಯಕ್ಷರು, ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ನಗರದ ಬೀಡಿ ಕಾಲೋನಿಯಲ್ಲಿ ವಾಸಿಸುತ್ತಿರುವ ಬಡವರಿಗೆ ಸ್ಥಳದಲ್ಲೇ ಹಕ್ಕುಪತ್ರ ನೀಡಬೇಕು. ನಗರದಲ್ಲಿ ಸಾವಿರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಇವರಿಗೆ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಧನ ಸಹಾಯ ನೀಡುವಂತೆ ಒತ್ತಾಯಿಸಿದರು.

ಕೆರೆಯಂಗಳ, ಬೀಡಿ ಕಾಲೋನಿ, ಮುಸ್ಲಿಂ ಬ್ಲಾಕ್, ಗುತ್ತಲು, ಹಾಲಹಳ್ಳಿ, ಎಸ್.ಡಿ.ಜಯರಾಂ ಬಡಾವಣೆ ಮತ್ತು ನಗರದಾದ್ಯಂ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಕೆಟ್ಟುಹೋಗಿರುವ ವಿದ್ಯುತ್ ದೀಪಗಳನ್ನು ತಕ್ಷಣದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಎಲ್ಲಾ ಬಡವರಿಗೂ ವೈದ್ಯಕೀಯ ಸೇವೆಗಳು ಸಿಗುವಂತೆ ಕ್ರಮ ವಹಿಸಬೇಕು. ನಗರದಲ್ಲಿ ನಿರುದ್ಯೋಗ ಬಡತನ ಹೆಚ್ಚುತ್ತಿದ್ದು, ರಾಷ್ಟ್ರೀಯ ಗ್ರಾಮೀಣ ಖಾತರಿ ಕಾಯ್ದೆಯನ್ನು ನಗರದ ಪ್ರದೇಶಕ್ಕೂ ಜಾರಿಗೊಳಿಸಿ ಉದ್ಯೋಗ ನೀಡಿ ಬಡತನವನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಬಿ.ಹನುಮೇಶ್, ಅಮಾಸಯ್ಯ, ಆರ್.ರಾಜು, ಅಬ್ದುಲ್ಲಾ, ಕುಷ್ಪರ್, ಬಾನು, ಶಾಕೀರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.