ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣರಸ್ತೆ ಹದಗೆಟ್ಟಿರುವ ಕಾರಣ ಜಲ್ಲಿಕಲ್ಲು, ಡಸ್ಟ್ ಸೇರಿದಂತೆ ಇನ್ನಿತರ ಬೂಸ್ಟರ್ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ತಡೆದು ತಾಲೂಕಿನ ಆವರ್ತಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟಿಸಿದರು.ಪ್ರತಿಭಟನೆಯಲ್ಲಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್. ಚಂದ್ರಶೇಖರ್ ಮಾತನಾಡಿ, ತಾಲೂಕಿನ ಬೆಟ್ಟದಪುರ ಹಾಗೂ ಬೈಲಕುಪ್ಪೆ ವ್ಯಾಪ್ತಿಯ ಅನೇಕ ಕ್ರಷರ್ ಗಳಲ್ಲಿ ಜಲ್ಲಿಕಲ್ಲು, ಡಸ್ಟ್, ಎಂ. ಸ್ಯಾಂಡ್ ಗಳನ್ನು ಯರ್ರಾಬಿರ್ರಿ ತುಂಬಿಕೊಂಡು ಭಾರೀ ಗಾತ್ರದ ವಾಹನದಲ್ಲಿ ಆವರ್ತಿ ಗ್ರಾಮದ ಮುಖ್ಯರಸ್ತೆಯಲ್ಲಿ ಪ್ರತಿದಿನ ನೂರಾರು ಲಾರಿಗಳು ಸಂಚರಿಸುತ್ತಿವೆ. ಈ ಲಾರಿಗಳ ಭರಾಟೆಯಿಂದ ತಾಲೂಕಿನ ಆವರ್ತಿ, ಮುತ್ತಿನ ಮುಳುಸೋಗೆ, ದಿಂಡಗಾಡು, ಚನ್ನಕಲ್ ಸೇರಿದಂತೆ ಈ ವ್ಯಾಪ್ತಿಯ ಗ್ರಾಮದ ರಸ್ತೆಗಳು ಹದಗೆಟ್ಟಿದ್ದು, ಡಾಂಬರ್ ಕಿತ್ತು ಹೋಗಿದೆ. ರಸ್ತೆಯ ಮಧ್ಯೆದಲ್ಲಿ ಗುಂಡಿಗಳು ಬಿದ್ದಿವೆ, ಪ್ರತಿನಿತ್ಯ ವಾಹನಗಳಿಂದ ಧೂಳು ಏಳುತ್ತಿದ್ದು, ಮಕ್ಕಳು ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ, ಅಲ್ಲದೇ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಲ್ಲಿನ ಜನರು ಈಗಾಗಲೇ ಕೆಮ್ಮು, ನೆಗಡಿ, ಶೀತ ಹಾಗೂ ಜ್ವರ ಕಾಣಿಸಿಕೊಳ್ಳುತ್ತದೆ. ಬೆಳೆಗಳು ಧೂಳಿನಿಂದ ಹಾಳಾಗುತ್ತಿವೆ, ಆದ್ದರಿಂದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಮರಳು ಲಾರಿಗಳ ಸಂಚಾರ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಚನ್ನಕಲ್ ಧನರಾಜ್ ಮಾತನಾಡಿ, ವಾಹನಗಳ ಮಾಲೀಕರು ರಸ್ತೆಗೆ ಧೂಳೆಬ್ಬಿದಂತೆ ನೀರನ್ನು ಹಾಕಬೇಕು. ಅತಿ ಹೆಚ್ಚು ಲೋಡ್ ಮಾಡಬಾರದು. ಲೂಡ್ ಮಾಡಿದ ವಾಹನಕ್ಕೆ ಟಾರ್ಪಲ್ ಕಟ್ಟಬೇಕು. ಗ್ರಾಮದೊಳಗೆ ಚಾಲಕರು ಅತಿ ವೇಗವಾಗಿ ಓಡಿಸಬಾರದು ಎಂದು ತಿಳಿಸಿದರು.ವಾಹನಗಳ ಮಾಲೀಕರು ಚಾಲಕರು ಸ್ಥಳಕ್ಕೆ ಬಂದು ಒಪ್ಪಿಗೆ ಸೂಚಿಸಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಗುವುದು ಎಂದು ಅವರು ಪಟ್ಟು ಹಿಡಿದು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದರು.ಮಾಲೀಕರು ಚಾಲಕರಾಗಲೀ ಸ್ಥಳಕ್ಕೆ ಬಂದು ಸ್ಪಂದಿಸದ ಕಾರಣ. ಸಂಬಂಧಪಟ್ಟ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಕರೆ ಮಾಡಿ ಚರ್ಚಿಸಿ ಇದಕ್ಕೆ ಕಾಲಾವಕಾಶ ಕೋರಿದ ಮೇರೆಗೆ ವಾಹನಗಳ ಮಾಲೀಕರನ್ನು ಕರೆದು ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ಮೇರೆಗೆ ಪ್ರತಿಭಟನಾಕಾರರು ಚರ್ಚಿಸಿ ಹಿಂಪಡೆದರು. ನಂತರ ವಾಹನಗಳು ಎಂದಿನಂತೆ ಚಲಿಸಿದವು.ಗ್ರಾಮದ ಮುಖಂಡರಾದ ಧರ್ಮ, ಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಪ್ಪ, ಅಶೋಕ್, ಮೋಹನ್ ಇದ್ದರು.