ಧಾರವಾಡ:
ರಾಜ್ಯ ಸರ್ಕಾರ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಹಾಗೂ ಕೃಷಿ ಅಧಿಕಾರಿಗಳ ಹುದ್ದೆಗೆ ಕೃಷಿಯೇತರ ಪದವೀಧರರಿಗೂ ಅವಕಾಶ ನೀಡಿರುವುದನ್ನು ವಿರೋಧಿಸಿ ಕಳೆದ 13 ದಿನಗಳಿಂದ ತರಹೇವಾರಿ ರೀತಿಯಲ್ಲಿ ಪ್ರತಿಭಟಿಸುತ್ತಿರುವ ಕೃಷಿ ಪದವೀಧರರು ಹಾಗೂ ವಿದ್ಯಾರ್ಥಿಗಳು ಸೋಮವಾರ ಕೃಷಿ ವಿವಿ ಬಂದ್ ಮಾಡಿ ಪ್ರತಿಭಟಿಸಿದರು.ವಿವಿಯ ಮುಖ್ಯದ್ವಾರ ಬಂದ್ ಮಾಡಿದ ಪ್ರತಿಭಟನಾಕಾರರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಬಯೋ ಟೆಕ್ನಾಲಜಿ ಪದವೀಧರರಿಗೂ ಕೃಷಿ ಹುದ್ದೆಗಳ ನೇಮಕಾತಿಯ ಅಧಿಸೂಚನೆ ರದ್ದುಗೊಳಿಸಲು ಆಗ್ರಹಿಸಿದರು. ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಿರುವ 945 ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಪದವೀಧರರನ್ನು ಮಾತ್ರ ಪರಿಗಣಿಸಬೇಕೆಂದು ಆಗ್ರಹಿಸಿದರು.
ಹಲವು ರೀತಿಯ ಪ್ರತಿಭಟನೆಗೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ವಿವಿ ದ್ವಾರ ಬಂದ್ ಮಾಡಿ ಸಿಬ್ಬಂದಿ, ಅಧಿಕಾರಿಗಳನ್ನು ಒಳ ಬಿಡದೇ ಕೆಲ ಹೊತ್ತು ಪ್ರತಿಭಟಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ವಿವಿ ಅಧಿಕಾರಿ ಹಾಗೂ ಸಿಬ್ಬಂದಿ ಹೊರಗೆ ಕಾಯಬೇಕಾದ ಸ್ಥಿತಿ ಉಂಟಾಯಿತು. ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಸಹ ವಹಿಸಿದ್ದರು.ಸ್ಥಳಕ್ಕಾಗಮಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪ್ರತಿಭಟನಾಕಾರರ ಮನವೊಲಿಕೆ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಜಿಟಿಜಿಟಿ ಮಳೆಯಲ್ಲೂ ಪ್ರತಿಭಟಿಸಿದ ಪದವೀಧರರು, ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿರುವುದಲ್ಲದೇ ಆದಷ್ಟು ಶೀಘ್ರ ಈ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಕೃಷಿ ವಿವಿಯಿಂದ ಭರವಸೆ ನೀಡಿದ್ದರಿಂದ ದ್ವಾರ ತೆರೆಯಲಾಯಿತು. ಅಲ್ಲದೇ, ಎಂದಿನಂತೆ ವಿವಿ ಆವರಣದಲ್ಲಿ ಪದವೀಧರರ ಪ್ರತಿಭಟನೆ ಮುಂದುವರಿಯಿತು