ಸಾರಾಂಶ
ತಾಲೂಕಿನ ಬಹುತೇಕ ಜಲಾಶಯ ಕೆರೆ, ಕಟ್ಟೆಗಳಿಗೆ ನದಿಯಿಂದ ನೀರು ಬಿಡುವ ಸದುದ್ದೇಶದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಬರಿದಾಗುತ್ತಿರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಫಲಪ್ರದಗೊಳಿಸಬೇಕು. ಜೊತೆಗೆ ಚೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಸಕಾಲದಲ್ಲಿ ಯಾವುದೇ ಕೆಲಸ, ಕಾರ್ಯಗಳು ಆಗುತ್ತಿಲ್ಲ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ ದುರಸ್ತಿಪಡಿಸಲು ಇಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗದವರು ರೈತರನ್ನು ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕ ಅಧ್ಯಕ್ಷ ಚಂಗಡಿ ಕರಿಯಪ್ಪ ತಿಳಿಸಿದರು.ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಬಹುತೇಕ ಜಲಾಶಯ ಕೆರೆ, ಕಟ್ಟೆಗಳಿಗೆ ನದಿಯಿಂದ ನೀರು ಬಿಡುವ ಸದುದ್ದೇಶದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಬರಿದಾಗುತ್ತಿರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಫಲಪ್ರದಗೊಳಿಸಬೇಕು. ಜೊತೆಗೆ ಚೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಸಕಾಲದಲ್ಲಿ ಯಾವುದೇ ಕೆಲಸ, ಕಾರ್ಯಗಳು ಆಗುತ್ತಿಲ್ಲ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ ದುರಸ್ತಿಪಡಿಸಲು ಇಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗದವರು ರೈತರನ್ನು ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಜೊತೆಗೆ ವಿದ್ಯುತ್ ಸಹ ನಿಗದಿತ ಸಮಯದಲ್ಲಿ ನೀಡದೇ ಕಣ್ಣಾ ಮುಚ್ಚಾಲೆ ಆಡುತ್ತಿದ್ದಾರೆ ಹಾಗೂ ಪಟ್ಟಣದ ಹುಲ್ಲೇಪುರ ಗ್ರಾಮದಲ್ಲಿರುವ ಧ್ರುವ ಪೌಲ್ಟ್ರಿ ಫಾರಂ ಶುಚಿಗೊಳಿಸದೇ ಗಬ್ಬುನಾರುತ್ತಿದೆ ಎಂದು ಆರೋಪಿಸಿದರು.ಜೊತೆಗೆ ಇಲ್ಲಿನ ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗಿದೆ ಮತ್ತು ಬೆಳೆಗಳ ಮೇಲೆ ಸಹ ನೊಣಗಳು ಕುಳಿತು ಬೆಳೆಯನ್ನು ಹಾಳು ಮಾಡುತ್ತಿವೆ. ಸಂಬಂಧಪಟ್ಟ ಕಂದಾಯ ಇಲಾಖೆ ಮತ್ತು ಪರಿಸರ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಸೆ. 26ರಂದು ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ತಾಲೂಕಿನ ಘಟಕ ವ್ಯಾಪ್ತಿಯ ಪ್ರತಿಯೊಬ್ಬ ರೈತನೂ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಘಟಕ ಅಧ್ಯಕ್ಷ ಮಾದಪ್ಪ ಮಾತನಾಡಿ, ಪಟ್ಟಣದ ಹೆಚ್ಚುವರಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿರುವ (ಅಭಿಲೇಖನಾಲಯ) ಭೂ ದಾಖಲೆಗಳ ಕಚೇರಿಯಲ್ಲಿ ಇಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗದವರು ರೈತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ, ದಿನನಿತ್ಯ ಈ ಕಚೇರಿಗೆ ಬರುವ ರೈತರು ತಮಗೆ ಬೇಕಾದ ತಮ್ಮ ಆಸ್ತಿ ಪಾಸ್ತಿಗಳ ಭೂ ದಾಖಲೆಗಳನ್ನು ಪಡೆಯಲು ಹೆಚ್ಚುವರು ಹಣ ನೀಡಿದರೆ ಒಂದೆರಡು ದಿನದಲ್ಲಿ ನೀಡುತ್ತಾರೆ, ಇಲ್ಲದಿದ್ದರೆ ಇಲ್ಲಿನ ಕಚೇರಿ ಸಿಬ್ಬಂದಿ ವರ್ಗದವರು ವಿಳಂಬ ಧೋರಣೆ ಅನುಸರಿಸುವುದರ ಜೊತೆಗೆ ರೈತರೊಂದಿಗೆ ಉಡಾಫೆಯಿಂದ ಮಾತನಾಡುತ್ತಾರೆ. ಇಲ್ಲಿನ ತಾಲೂಕು ದಂಡಾಧಿಕಾರಿಯವರು ಶಿಸ್ತು ಕ್ರಮ ಕೈಗೊಂಡು ಇಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ಬದಲಾವಣೆ ಮಾಡಬೇಕು, ಇಲ್ಲದಿದ್ದರೆ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಒತ್ತಾಯಿಸಿದರು.ರಾಜು, ಉಮೇಶ, ಬಸವಣ್ಣ, ಮಹದೇವ ಇನ್ನಿತರ ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.