ರಸ್ತೆ ತಡೆದು ಹಿಂದುಪರ ಸಂಘಟನೆಗಳ ಪ್ರತಿಭಟನೆ

| Published : May 26 2024, 01:33 AM IST

ಸಾರಾಂಶ

ಅವಿನಾಶ ಮೇಲಿನ ಹಲ್ಲೆ ಖಂಡಿಸಿ ಮುಧೋಳ ರನ್ನ ಸರ್ಕಲ್ ನಲ್ಲಿ ಹಿಂದುಪರ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಶುಕ್ರವಾರ ತಡರಾತ್ರಿ ನಗರದ ಅವಿನಾಶ ಮುಂಡಗನೂರ ಮೇಲಿನ ಹಲ್ಲೆ ಖಂಡಿಸಿ ಹಿಂದುಪರ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ರನ್ನ ಸರ್ಕಲ್ ಬಳಿ ಜಮಾಯಿಸಿದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಕೆಲಹೊತ್ತು ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಲ್ಲೆಕೋರರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಬೇಕು, ನಗರದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ರಸ್ತೆ ತಡೆದು ಪ್ರತಿಭಟಿಸಿದರು. ಮುಂಜಾಗ್ರತಾ ಕ್ರಮವಾಗಿ ಮುಧೋಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಘಟನೆ ಹಿನ್ನಲೆ: ಅವಿನಾಶ ಮುಂಡಗನೂರ ಎಂಬ ರೈತ 5 ತಿಂಗಳ ಹಿಂದೆ ಸೈಪನ್‌ಸಾಬ ಅಲಿಯಾಸ್‌ ಚಿಂದೀಪೀರ್ ಬೇಪಾರಿ ಎಂಬುವನಿಗೆ ಎಮ್ಮೆ ಮಾರಾಟ ಮಾಡಿದ್ದ. ಎಮ್ಮೆ ಖರೀದಿಸಿದ ಬೇಪಾರಿ ಬಳಿ ಹಣ ಕೇಳೋಕೆ ಹೋದಾಗ ಮಾತಿಗೆ ಮಾತು ಬೆಳೆದು ಬೇಪಾರಿ ಹಾಗೂ ಬೆಂಬಲಿಗರು ಅವಿನಾಶ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಾಯಗೊಂಡ ಅವಿನಾಶನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ದೂರು ದಾಖಲಾಗಿದ್ದು, ನಾಲ್ವರನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.ಅಂಜುಮನ್ ಕಮಿಟಿ ಮನವಿ: ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅಂಜುಮನ್ ಕಮಿಟಿಯವರು ಸುದ್ದಿಗೋಷ್ಠಿ ನಡೆಸಿ ಘಟನೆಯನ್ನು ಖಂಡಿಸಿದ್ದಾರೆ. ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು, ಈ ಘಟನೆ ವೈಯಕ್ತಿಕವಾಗಿದ್ದು, ಹಿಂದು-ಮುಸ್ಲಿಂ ಸಮುದಾಯದ ಸೌಹಾರ್ದತೆಗೆ ಧಕ್ಕೆ ಉಂಟಾಗಬಾರದೆಂದು ಮನವಿ ಮಾಡಿದರು.