ಕೋಮು ಸೌಹಾರ್ದತೆ ಕದಡುವ ಸಂದೇಶ ಪೋಸ್ಟ್, ಅಂಕೋಲಾ ಠಾಣೆ ಎದುರು ಹಿಂದೂ ಸಂಘಟನೆಗಳ ಪ್ರತಿಭಟನೆ

| Published : Jan 25 2024, 02:01 AM IST

ಕೋಮು ಸೌಹಾರ್ದತೆ ಕದಡುವ ಸಂದೇಶ ಪೋಸ್ಟ್, ಅಂಕೋಲಾ ಠಾಣೆ ಎದುರು ಹಿಂದೂ ಸಂಘಟನೆಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ಯಕೋಮಿನ ಯುವಕನೊರ್ವ ಕೋಮು ಸೌಹಾರ್ದತೆ ಕದುಡುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಮತ್ತು ಸಹಸ್ರಾರು ಹಿಂದೂ ಯುವಕರು ಬುಧವಾರ ಸಂಜೆ ಇಲ್ಲಿನ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಅಂಕೋಲಾ:

ಅನ್ಯಕೋಮಿನ ಯುವಕನೊರ್ವ ಕೋಮು ಸೌಹಾರ್ದತೆ ಕದುಡುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಮತ್ತು ಸಹಸ್ರಾರು ಹಿಂದೂ ಯುವಕರು ಬುಧವಾರ ಸಂಜೆ ಇಲ್ಲಿನ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥ ಯುವಕನಿಗೆ ಶಿಕ್ಷೆ ವಿಧಿಸಬೇಕೆಂದು ಘೋಷಣೆ ಕೂಗಿದರು.ತಾಲೂಕಿನ ಹುಲಿದೇವರವಾಡದಲ್ಲಿ ವಾಸಿಸುವ ಜಾಫರ್‌ ಸಾಮಾಜಿಕ ಜಾಲತಾಣದಲ್ಲಿ ತಾಳ್ಮೆಯಿಂದ ಕಾಯುತ್ತೇವೆ. ನಮ್ಮ ಸಮಯ ಬರುತ್ತದೆ. ಕುತ್ತಿಗೆ ಕಡಿದು ದೇಹದಿಂದ ಬೇರ್ಪಡಿಸುತ್ತೇವೆ ಎನ್ನುವ ಸಂದೇಶವನ್ನು ಪೋಸ್ಟ್‌ ಮಾಡಿದ್ದು ಈ ರೀತಿ ಪ್ರತಿಭಟನೆಗೆ ಕಾರಣವಾಗಿದೆ. ಆ ಯುವಕನನ್ನು ತಮ್ಮ ಮುಂದೆ ತಂದು ಆತನ ಬಾಯಿಯಿಂದ ಜೈ ಶ್ರೀರಾಮ ಘೋಷಣೆ ಹೇಳಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದವು. ಆಗ ಪಿಎಸ್‌ಐ ಉದ್ದಪ್ಪ ದರೆಪ್ಪನವರ, ಎಲ್ಲ ಸಂಘಟನೆಗಳ ಐವರು ಪ್ರಮುಖರನ್ನು ಠಾಣೆಯೊಳಗೆ ಕರೆಸಿದರು. ಬಳಿಕ ಪೊಲೀಸರು ಯುವಕನನ್ನು ವಿಚಾರಿಸಿದಾಗ ಆತ ತನಗೆ ಬೇರೆಡೆಯಿಂದ ಮೇಸೆಜ್ ಬಂದಿದ್ದು, ಅದನ್ನು ನಾನು ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ. ಸಂಘಟಕರು ಈತನ ಮೇಲೆ ಕ್ರಮವಾಗಬೇಕೆಂದು ಆಗ್ರಹಿಸಿದರು.ಸಿಪಿಐ ಸಂತೋಷ ಶೆಟ್ಟಿ ಮಾತನಾಡಿ, ಕಾನೂನಿನ ಪ್ರಕಾರ ವಿಚಾರಣೆ ಮಾಡಲಾಗುವುದು. ಈ ಕೃತ್ಯದ ಹಿಂದೆ ಯಾರ್‍ಯಾರು ಇದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ. ಸಾರ್ವಜನಿಕರು ದೂರು ನೀಡದಿದ್ದರೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಇಲಾಖೆಯಿಂದ ಸ್ವಯಂ ದೂರು ದಾಖಲಿಸಲಾಗುವುದು. ಪ್ರತಿಯೊಬ್ಬರಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಯಾರೂ ಸಹ ಗಲಾಟೆ ಮಾಡಬಾರದು ಎಂದು ಮನವಿ ಮಾಡಿದರು.

ಈ ಮಧ್ಯೆ ಮುಸ್ಲಿಂ ಸಮಾಜದ ಪ್ರಮುಖರು ಬಂದು ಹಿಂದೂ ಸಂಘಟನೆಗಳ ಜತೆ ಮಾತುಕತೆ ನಡೆಸಿ ತಪ್ಪು ಮಾಡಿದವರು ಯಾರೇ ಆದರು ಕಾನೂನಿನ ಪ್ರಕಾರ ಶಿಕ್ಷೆ ಆಗಲೇಬೇಕು. ಅಂಕೋಲಾ ಸೌಹಾರ್ದತೆಯಿಂದ ಇರುವ ತಾಲೂಕು. ಎಲ್ಲಿಂದಲೋ ಬಂದ ಕೆಲವರಿಂದ ಈ ರೀತಿ ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಇದನ್ನು ನಾವು ಬೆಂಬಲಿಸುವುದಿಲ್ಲ. ಕಾನೂನಿನ ಪ್ರಕಾರ ಈ ಸಂದೇಶ ರವಾನಿಸಿದ ಯುವಕನಿಗೆ ಶಿಕ್ಷೆಯಾಗಲಿ ಎಂದರು.

ಸಹಸ್ರಾರು ಹಿಂದೂ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು. ಪಿಎಸ್‌ಐಗಳಾದ ಸುನೀಲ, ಸುಹಾಸ, ಜಯಶ್ರೀ ಮತ್ತು ಗೋಕರ್ಣದ ಪೊಲೀಸ್‌ ನಿರೀಕ್ಷಕ ವಸಂತ ಆಚಾರಿ, ಕುಮಟಾದ ಪಿಎಸ್‌ಐ ಸಂಪತ್ತಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದು ಪರಿಸ್ಥಿತಿ ಉದ್ವಿಘ್ನ ಆಗದಂತೆ ನೋಡಿಕೊಂಡರು.

ಕೋಮುಪ್ರಚೋದನಾಕಾರಿ ಪೋಸ್ಟರ್, ಇಬ್ಬರ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಕೋಮುಪ್ರಚೋದನಾಕಾರಿ ಪೋಸ್ಟರ್ ಹಾಕಿದ ಸಂಬಂಧ ಕಾರವಾರ ನಗರ, ಅಂಕೋಲಾ ಠಾಣೆಯಲ್ಲಿ ಬುಧವಾರ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಮೂವರು ಮುಸ್ಲಿಂ ಯುವಕರು ಬಾಬ್ರಿ ಮಸೀದಿಯ ಭಾವಚಿತ್ರ ಹಾಕಿ ಸಬರ್, ಜಬ್ ವಕ್ತ ಹಮಾರಾ ಆಯೇಗಾ ತಬ್ ಸಿರ್ ದಡ್ ಸೇ ಅಲಗ್ ಕಿಯೇ ಜಾಯೆಂಗೆ ಎಂಬ ಪೋಸ್ಟರ್ ಹಾಕಿ ಕೋಮು ಸೌಹಾರ್ದ ಕದಡುವ ರೀತಿ ಬರೆದಿದ್ದರು. ಕಾರವಾರದ ಜಿಶಾನ್, ಅಂಕೋಲಾದ ಜಾಫರ್, ಕಾರವಾರದ ಅಪ್ರಾಪ್ತನ ಮೇಲೆ ಪ್ರಕರಣ ದಾಖಲಾಗಿದೆ. ಜಿಶಾನ್‌, ಜಾಫರ್‌ನ್ನು ಬಂಧಿಸಲಾಗಿದೆ‌. ಕಾರವಾರದ ಮತ್ತೊಬ್ಬ ಅಪ್ರಾಪ್ತ ತಲೆ ಮರಿಸಿಕೊಂಡಿದ್ದಾನೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ, ಅಂಕೋಲಾ ಠಾಣೆಯಲ್ಲಿ ಒಂದು ಸುಮೊಟೊ ಪ್ರಕರಣ ದಾಖಲಾಗಿದೆ.