ಒಳ ಮೀಸಲಾತಿಗೆ ಆಗ್ರಹಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ

| Published : Oct 17 2024, 12:04 AM IST

ಸಾರಾಂಶ

ಒಳ ಮೀಸಲಾತಿಗೆ ಜಾರಿ ಸಂಬಂಧ ಆಯಾ ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿದೆ.

ಬಳ್ಳಾರಿ: ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಜರುಗಿತು.

ಒಳ ಮೀಸಲಾತಿಗೆ ಜಾರಿ ಸಂಬಂಧ ಆಯಾ ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿದೆ. ಆದರೆ, ಈವರೆಗೆ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದೆ. ಸುಪ್ರೀಂಕೋರ್ಟ್ ನ ಆದೇಶ ಹೊರ ಬೀಳುತ್ತಿದ್ದಂತೆಯೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸರ್ಕಾರಗಳು, ಮೀಸಲಾತಿ ಅನುಷ್ಠಾನಕ್ಕೆ ಬೇಕಾದ ಪೂರಕ ಕ್ರಮಗಳನ್ನು ಆರಂಭಿಸಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಯಾವುದೇ ಕಾಳಜಿ ವಹಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.

ಒಳ ಮೀಸಲಾತಿಗೆ ಕಾಂಗ್ರೆಸ್ ಸರ್ಕಾರ ದಿಢೀರ್ ಕ್ರಮ ವಹಿಸಲಿದೆ. ಈ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗಲಿದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಸಿಎಂ ಸಿದ್ಧರಾಮಯ್ಯ ದಲಿತರು ಹಾಗೂ ಶೋಷಿತರ ವಿಚಾರದಲ್ಲಿ ನ್ಯಾಯ ನೀಡುವ ಯಾವುದೇ ಸುಳಿವು ಕಂಡು ಬರುತ್ತಿಲ್ಲ. ಬರೀ ಬಾಯಿ ಮಾತಿನಲ್ಲಿ ಶೋಷಿತರ ಪರ ಎಂಬಂತೆ ಸಿಎಂ ಬಿಂಬಿತವಾಗುತ್ತಿರುವುದು ಕಂಡು ಬರುತ್ತಿದೆ. ನಿಜಕ್ಕೂ ಮುಖ್ಯಮಂತ್ರಿಗಳಿಗೆ ದಲಿತ ಸಮಾಜದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಒಳ ಮೀಸಲಾತಿಗೆ ಮುಂದಾಗಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಎಚ್.ಹನುಮಂತಪ್ಪ, ರಾಜ್ಯದ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿದರಲ್ಲದೆ, ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯ ಅವರ ದಲಿತವಿರೋಧಿ ಧೋರಣೆ ವಿರುದ್ಧ ಹೋರಾಟ ಮುಂದುವರಿಯಲಿದೆ. ಇನ್ನು ಹದಿನೈದು ದಿನದೊಳಗೆ ಸರ್ಕಾರ ಈ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳದೇ ಹೋದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಜಿಲ್ಲಾ ಮುಖಂಡರಾದ ಸಿ.ಸೋಮಶೇಖರ್, ಎಚ್.ಹುಸೇನಪ್ಪ, ಎನ್.ಡಿ.ವೆಂಕಮ್ಮ, ವಿಜಯಕುಮಾರ್, ರಮೇಶ್, ಕುರುವಳ್ಳಿ ನಾಗರಾಜ್, ನಾಗಭೂಷಣ, ಅರುಣಾಚಲ, ದಾನಪ್ಪ, ನಾಗಭೂಷಣ, ಹೊನ್ನೂರಸ್ವಾಮಿ, ಶಿವಶಂಕರ್, ಸಿದ್ದೇಶ್ವರ, ರಾಮಣ್ಣ, ಎಚ್‌.ಕೆ.ಗಂಗಾಧರ, ರಮೇಶ್ ಕುಮಾರ್, ರಾಘವೇಂದ್ರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.