ಸಾರಾಂಶ
ಬಳ್ಳಾರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯಲ್ಲಿ ತೊಡಗಿಸಿಕೊಂಡಿದ್ದು, ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಆರೋಪಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚುನಾವಣೆಮುನ್ನದ ಘೋಷಣೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣಗೊಂಡಿವೆ. ಉದ್ಯೋಗವಿಲ್ಲದೆ ಯುವಜನತೆ ಪರದಾಡುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಕೇಂದ್ರದ ಭರವಸೆ ಹುಸಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿಲ್ಲ. ಜನಸಾಮಾನ್ಯರ ಬದುಕಿನ ಬಗ್ಗೆ ಮಾತನಾಡುವ ಬದಲು ಕೇಂದ್ರ ಸರ್ಕಾರವು ಜಾತಿ- ಧರ್ಮದಂಥ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದೆ. ರಾಜ್ಯ ಸರ್ಕಾರವೂ ಇದಕ್ಕೆ ಭಿನ್ನವಾಗಿಲ್ಲ.ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರಾಜ್ಯ ಸರ್ಕಾರ ನಿರ್ವಹಣೆಯಲ್ಲಿ ವಿಫಲವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಲ್ಲಿಲ್ಲ. ಈ ಯೋಜನೆಯು ಅನೇಕ ದೋಷಗಳಿಂದ ಕೂಡಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ರಾಜ್ಯ ಪ್ರಗತಿಯಲ್ಲಿ ತೀವ್ರ ಹಿನ್ನಡೆ ಕಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಗರದ ಗಾಂಧಿ ಭವನದಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಇದೇ ವೇಳೆ ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾ ಹಾಗೂ ಜಿಲ್ಲಾ ಸಮಿತಿ ಸದಸ್ಯ ಎ. ದೇವದಾಸ್ ಮಾತನಾಡಿದರು.ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ ದೇಶದ ಶೇ. 77ರಷ್ಟು ಸಂಪತ್ತು ಶೇ. 10 ಮಂದಿ ಶ್ರೀಮಂತರ ಕೈಗಳಲ್ಲಿದೆ ಎಂದು ವರದಿಯಾಗಿದೆ. ಶ್ರೀಮಂತ ಕಾರ್ಪೊರೇಟ್ ಕಂಪನಿಗಳ ಆಶೀರ್ವಾದದಿಂದ ಅಧಿಕಾರಕ್ಕೆ ಬರುವ ಎಲ್ಲ ರಾಜಕೀಯ ಪಕ್ಷಗಳು ಅವರ ಪರವಾಗಿ ತರುವ ನೀತಿಗಳಿಂದಾಗಿ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಎಂ.ಎನ್. ಮಂಜುಳಾ, ನಿವೃತ್ತ ಉಪನ್ಯಾಸಕ ನರಸಣ್ಣ ಅವರು ಮಾತನಾಡಿದರು.ಜಿಲ್ಲಾ ಪ್ರಮುಖರಾದ ಡಾ.ಪ್ರಮೋದ್, ನಾಗಲಕ್ಷ್ಮಿ, ಸೋಮಶೇಖರ್ ಗೌಡ, ಶಾಂತಾ, ಗೋವಿಂದ, ನಾಗರತ್ನ, ಪಂಪಾಪತಿ ಕೋಳೂರು, ಹನುಮಪ್ಪ, ಈಶ್ವರಿ, ಜಗದೀಶ್, ರಾಜ, ವಿಜಯಲಕ್ಷ್ಮಿ, ರವಿಕಿರಣ್ ಸೇರಿದಂತೆ ಪಕ್ಷದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಹಾಗೂ ಬೆಂಗಳೂರು ಚಲೋ ಚಳವಳಿ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.