ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ, ಮತದಾನದ ಹಕ್ಕಿನ ಸಂರಕ್ಷಣೆ ಹಾಗೂ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳ ವತಿಯಿಂದ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗುರುವಾರ "ವೋಟ್ ಬಚಾವೋ ದೇಶ್ ಬಚಾವೋ ಅಭಿಯಾನ "ದಡಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ವೋಟ್ ಬಚಾವೋ ದೇಶ್ ಬಚಾವೋ ಅಭಿಯಾನದಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ಗದಗ
ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ, ಮತದಾನದ ಹಕ್ಕಿನ ಸಂರಕ್ಷಣೆ ಹಾಗೂ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳ ವತಿಯಿಂದ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗುರುವಾರ "ವೋಟ್ ಬಚಾವೋ ದೇಶ್ ಬಚಾವೋ ಅಭಿಯಾನ "ದಡಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ರಕ್ಷಣೆ, ಸಂವಿಧಾನದ ಆಶಯಗಳ ಪಾಲನೆ ಹಾಗೂ ಮತದಾನದ ಹಕ್ಕಿನ ಸಂರಕ್ಷಣೆಗೆ ಹೋರಾಟ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಾಸಪ್ಪ ಕುರುಡಗಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಜನರ ಮತವೇ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಆ ಮತದಾನದ ಹಕ್ಕಿಗೆ ಧಕ್ಕೆಯಾಗುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಬೇಕು. ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಜನರೊಂದಿಗೆ ನಿಂತು ಹೋರಾಟ ನಡೆಸಲಿದೆ ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಯುವಜನರು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನದ ಹಕ್ಕು ಕೇವಲ ಒಂದು ದಿನದ ಚುನಾವಣಾ ಪ್ರಕ್ರಿಯೆಯಲ್ಲ, ಅದು ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನ ನೀಡಿರುವ ಅಮೂಲ್ಯ ಅವಕಾಶವಾಗಿದೆ. ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾರರ ಹಕ್ಕುಗಳ ರಕ್ಷಣೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವದ ಬುನಾದಿಯಾಗಿರುವ ಚುನಾವಣಾ ವ್ಯವಸ್ಥೆಯ ಮೇಲೆ ಜನರಿಗೆ ವಿಶ್ವಾಸ ಉಳಿಯಬೇಕಾದರೆ ಮತದಾರರ ಪಟ್ಟಿ ಪಾರದರ್ಶಕವಾಗಿರಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಿರಬಾರದು. ಸಂವಿಧಾನಾತ್ಮಕ ಸಂಸ್ಥೆಗಳು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾದಾಗ ಕಾಂಗ್ರೆಸ್ ಪಕ್ಷ ಮೌನವಾಗಿರದೆ ಜನರ ಧ್ವನಿಯಾಗಿ ಹೋರಾಟ ನಡೆಸಲಿದೆ ಎಂದರು.ಹುಮಾಯೂನ್ ಮಾಗಡಿ, ಎಸ್.ಎನ್.ಬಳ್ಳಾರಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಬಿ.ಬಿ. ಅಸೂಟಿ, ಬಸವರಾಜ ಸುಂಕಾಪೂರ, ಪ್ರವೀಣ ಯಾವಗಲ್ಲ, ಡಿ.ಡಿ. ಮೋರನಾಳ, ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ, ಶರಣಪ್ಪ ಬೆಟಗೇರಿ, ಸುಜಾತಾ ದೊಡ್ಡಮನಿ, ಮೋಹನ ಅಸುಂಡಿ, ಲಕ್ಷ್ಮಿ ಸಿದ್ಧಮ್ಮನಹಳ್ಳಿ, ಶಕುಂತಲಾ ಅಕ್ಕಿ, ಪರವೀನ್ ಬಾನು ಮುಲ್ಲಾ, ವೀಣಾ ಕಟ್ನಿಳ್ಳಿ, ವಾಣಿ ಹಿರೇಮಠ, ಅನ್ವರ ನಧಾಪ, ಮಹೇಶ ನೀಲಗುಂದ, ಮುನ್ನಾ ಡಾಲಾಯತ, ಎಸ್.ಟಿ. ಮಕಾಂದಾರ, ಪ್ರಕಾಶ ಕರಿ ಸೇರಿ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ಎಸ್ಯುಐ ಕಾರ್ಯಕರ್ತರು, ವಿವಿಧ ಮುಂಚೂಣಿ ಘಟಕಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.