ನೀರು ಪೂರೈಸುವಂತೆ ಆಗ್ರಹಿಸಿ ಬ್ಯಾಡಗಿಯಲ್ಲಿ ಮಹಿಳೆಯರಿಂದ ಪ್ರತಿಭಟನೆ

| Published : Mar 26 2024, 01:02 AM IST / Updated: Mar 26 2024, 01:03 AM IST

ನೀರು ಪೂರೈಸುವಂತೆ ಆಗ್ರಹಿಸಿ ಬ್ಯಾಡಗಿಯಲ್ಲಿ ಮಹಿಳೆಯರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳವೆಬಾವಿ ಮೂಲಕ ನೀರು ಸಮರ್ಪಕವಾಗಿ ಪೂರೈಸುತ್ತಿಲ್ಲ, ಕೂಡಲೇ ನೀರು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ಬಡಾವಣೆ ನೂರಾರು ಮಹಿಳಾ ನಿವಾಸಿಗಳು ಪುರಸಭೆ ಕಾರ್ಯಾಲಯದ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ಕೊಳವೆಬಾವಿ ಮೂಲಕ ನೀರು ಸಮರ್ಪಕವಾಗಿ ಪೂರೈಸುತ್ತಿಲ್ಲ, ಕೂಡಲೇ ನೀರು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ಬಡಾವಣೆ ನೂರಾರು ಮಹಿಳಾ ನಿವಾಸಿಗಳು ಪುರಸಭೆ ಕಾರ್ಯಾಲಯದ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ಮಂಜುಳಾ, ನಾವು ಬ್ಯಾಡಗಿ ಎತ್ತರದ ಗುಡ್ಡದ ಮೇಲಿನ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದೇವೆ, ನಮಗೆ ತುಂಗಭದ್ರ ನದಿ ನೀರು ಸೇರಿದಂತೆ ಕೊಳವೆಬಾವಿ ನೀರು ಕೂಡ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ಕಳೆದ ವಾರದಿಂದ ನದಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದು, ಕೊಳವೆ ಬಾವಿ ನೀರು ಪೂರೈಸಲಾಗುತ್ತಿದೆ. ಆದರೆ ಬೆಟ್ಟದ ಮೇಲಿನ ಬಹುತೇಕ ಮನೆಗಳಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.ಕೂಲಿ ಬಿಟ್ಟು ನೀರು ತರಬೇಕಿದೆ: ಲಕ್ಷ್ಮವ್ವ ನರೇಗಲ್ಲ ಮಾತನಾಡಿ, ನಾವು ಮೆಣಸಿನಕಾಯಿ ತುಂಬು ಬಿಡಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕು ಆದರೆ ಮನೆಯಲ್ಲಿ ವಯೋವೃದ್ಧರಿದ್ದಾರೆ. ನಿತ್ಯವೂ ನೀರಿಗಾಗಿ ಪರದಾಡಬೇಕಿದೆ, ದಿನಕ್ಕೆ 10 ಕೊಡಪಾನ ನೀರು ಬರೋದಿಲ್ಲ, ಹೀಗಾದ್ರೆ ನಮ್ಮ ಗೋಳು ಕೇಳವರ‍್ಯಾರು..? ನಾವು ಆಯ್ಕೆ ಮಾಡಿದ ಪುರಸಭೆ ಸದಸ್ಯರು ಸಹ ಸಮಸ್ಯೆ ಕೇಳುತ್ತಿಲ್ಲ. ಹೀಗಾದರೇ ನಮ್ಮ ಗೋಳು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಟ್ಯಾಂಕರ್ ಮೂಲಕ ನೀರು: ಟ್ಯಾಂಕರ್ ನೀರು ಪೂರೈಸಬೇಕು, ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಬಳಕೆಯೂ ಹೆಚ್ಚಾಗುತ್ತಿದೆ, ಹೊಸದಾಗಿ ಕೊಳವೆ ಬಾವಿ ಕೊರೆಸಿ ನೀರು ಪೂರೈಸಬೇಕು ಇಲ್ಲವೇ ವ್ಯವಸ್ಥೆ ಸರಿಯಾಗುವವರೆಗೂ ಟ್ಯಾಂಕರ್ ಮೂಲಕ ನೀರು ಮಾಡುವಂತೆ ಬಿಗಿಪಟ್ಟು ಹಿಡಿದರಲ್ಲದೇ ಇದಕ್ಕೆ ಸೂಕ್ತ ಉತ್ತರ ಸಿಗುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದರು.ಪ್ರತಿಭಟನಾನಿರತ ಮಹಿಳೆಯರು ಕೊಡಪಾನ ಹಿಡಿದು ಕಚೇರಿ ಒಳಗೆ ನುಗ್ಗಿದರು. ಈ ವೇಳೆ ಮುಖ್ಯಾಧಿಕಾರಿಗಳು ಎಲ್ಲರನ್ನು ಸಮಾಧಾನಪಡಿಸಿ ನೀರಿನ ಸಮಸ್ಯೆ ಉಂಟಾಗಿದೆ, ತುಂಗಭದ್ರಾ ನದಿಯಲ್ಲಿ ನೀರಿಲ್ಲ ಕೆಲ ದಿನಗಳಲ್ಲಿ ಸರಿ ಹೋಗಲಿದೆ ಎಂದು ಸಮಜಾಯಿಷಿ ನೀಡಲು ಮುಂದಾದರಾದರೂ ಪ್ರಯೋಜನವಾಗಲಿಲ್ಲ, ಮುಖ್ಯಾಧಿಕಾರಿಗಳ ಉತ್ತರದಿಂದ ಇನ್ನಷ್ಟು ಸಿಡಿಮಿಡಿಗೊಂಡ ಮಹಿಳೆಯರು, ನೀವು ಏನೂ ಹೇಳೋದು ಬ್ಯಾಡ್ರಿ ಖುದ್ದಾಗಿ ಬೆಟ್ಟದ ಮಲ್ಲೇಶ್ವರ ಬಡಾವಣೆ ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿ ನೋಡುವಂತೆ ಬಿಗಿಪಟ್ಟು ಹಿಡಿದರು. ಮಹಿಳೆಯರ ಒತ್ತಡಕ್ಕೆ ಮಣಿದು ಮುಖ್ಯಾಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ ಬಳಿಕ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹ್ಮದ್‌ ರಫೀಕ ಮುದುಗಲ್ಲ, ಮಾಜಿ ಸದಸ್ಯ ಮಂಜುನಾಥ ಬೋವಿ, ವಕೀಲ ಎಂ.ಎ. ಹಂಜಗಿ, ಮಾಲತೇಶ ಮಡಿವಾಳರ, ವಿಜಯಲಕ್ಷ್ಮೀ ಖಟಾವಕರ, ಚಂದ್ರಕ್ಕ ಬ್ಯಾಡಗಿ, ಹಜರಾಭಾನು ಕಾಟೇನಹಳ್ಳಿ, ಹರೀಪ್ ಎಂ., ಶಾರೀಕುಮಾರಿ ಲಮಾಣಿ, ಫಾತೀಮ ದಾವಣಗೆರೆ, ಗೌರಮ್ಮ ಬುಳ್ಳಪ್ಪನವರ, ಹೊನ್ನವ್ವ ಶಿರಗೇರಿ ಇನ್ನಿತರರಿದ್ದರು.ತುಂಗಭದ್ರಾ ನದಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಮಿನಿ ಟ್ಯಾಂಕ್‌ಗಳಿಗೆ ಕೊಳವೆ ಬಾವಿ ನೀರು ಪೂರೈಸುವ ಮೂಲಕ ನೀರು ಒದಗಿಸುತ್ತಿದ್ದೇವೆ, ಭದ್ರಾ ಡ್ಯಾಂ ಮೂಲಕ ನೀರು ಹರಿಸಲಾಗಿದ್ದು, ಬರುವ ಎಂಟೆತ್ತು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಅಲ್ಲಿಯವರೆಗೂ ಎಂದಿನಂತೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಹೇಳಿದರು.