ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಕೀಲನ ಮೇಲೆ ಹಲ್ಲೆ ನಡೆಸಿದ ಟೋಲ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಕೀಲರು ತಾಲೂಕಿನ ಗಣಂಗೂರು ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯ ಟೋಲ್ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ತೂಬಿನಕೆರೆ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯ ದಶಪಥ ಹೆದ್ದಾರಿಯಿಂದ ಪಾಂಡವಪುರ ಕಡೆಗೆ ಹೊರ ಹೋಗುವ ರಸ್ತೆಯನ್ನು (ಎಕ್ಸಿಟ್) ಟೋಲ್ ಸಿಬ್ಬಂದಿ ಬಂದ್ ಮಾಡಿದ್ದರು. ಕಾರ್ಯ ನಿಮಿತ್ತ ಭಾನುವಾರ ಪಾಂಡವಪುರ ಕಡೆಗೆ ತೆರಳುತ್ತಿದ್ದ ಬೆಂಗಳೂರಿನ ವಕೀಲ ಪುಟ್ಟಬೈರೇಗೌಡ ಇದನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ಹಾಗೂ ವಕೀಲನ ನಡುವೆ ಮಾತಿನ ಚಕಮಕಿ ಏರ್ಪಟ್ಟು ವಕೀಲ ಪುಟ್ಟಬೈರೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹದ್ಯೋಗಿ ಮೇಲೆ ಹಲ್ಲೆ ನಡೆಸಿದ್ದರಿಂದ ಮಂಗಳವಾರ ಬೆಳಗ್ಗೆ ಬೆಂಗಳೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವಕೀಲರು ತಾಲೂಕಿನ ಗಣಂಗೂರು ಟೋಲ್ ಪ್ಲಾಜಾಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹಲ್ಲೆ ನಡೆಸಿದ ಟೋಲ್‌ನ ಗೂಂಡಾ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.ಪಾಂಡವಪುರಕ್ಕೆ ತೆರಳುವ ಎಕ್ಸಿಟ್ ರೂಟ್‌ನ್ನು ಏಕಾಏಕಿ ಬಂದ್ ಮಾಡಿರುವ ಟೋಲ್ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಟೋಲ್ ಸಿಬ್ಬಂದಿ ಗೂಂಡಾ ವರ್ತನೆಗೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಹಲ್ಲೆ ನಡೆಸಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಟೋಲ್ ನಲ್ಲಿ ಮಾನವ ಸರಪಳಿ ರಚಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಟೋಲ್ ಸಿಬ್ಬಂದಿ ಏಕಾಏಕಿ ರಸ್ತೆ ಬಂದ್ ಮಾಡಿದ್ದರಿಂದ ಪಾಂಡವಪುರಕ್ಕೆ ತೆರಳಲು ಸಾಧ್ಯವಾಗದೆ ವಾಹನ ಸವಾರರ ಪರದಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ವಕೀಲನ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರನ್ನು ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿಯೂ ವಕೀಲರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಗೌಡ, ವಕೀಲರಾದ ಚಂದ್ರೇಗೌಡ, ಎ. ಕುಮಾರ್, ಮಂಡ್ಯ ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಹಲವರು ಭಾಗವಹಿಸಿದ್ದರು.