ನಾವು ಪ್ರತಿಭಟನೆ ನಡೆಸಿದ ನಂತರ ಅಧಿಕಾರಿಗಳು ಆರು ತಿಂಗಳೊಳಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಕೊಟ್ಟ ಅವಧಿಯಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೊಳ್ಳೇಗಾಲ: ಇಲ್ಲಿನ ಮುಡಿಗುಂಡ ಮತ್ತು ಶಂಕನಪುರ ಬಡಾವಣೆಗಳ ಸ್ಲಮ್ ಬೋರ್ಡ್ ಮನೆಗಳಿಗೆ ಇ– ಸ್ವತ್ತು ಮತ್ತು ರಿಜಿಸ್ಟರ್ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಮಹಿಳಾ ವಾಸಿಗಳು ನಗರಸಭೆಯ ಪೌರಾಯುಕ್ತರ ಕಚೇರಿಯ ಮುಂದೆ ಪ್ರತಿಭಟಿಸಿದರು.

ನಾವು ಹಲವು ವರ್ಷಗಳಿಂದ ಶಂಕನಪುರದಲ್ಲಿ ವಾಸಿಸುತ್ತಿದ್ದರೂ ನಮ್ಮ ನಿವೇಶನಗಳಿಗೆ ಈವರೆಗೂ ಇ– ಸ್ವತ್ತು, ರಿಜಿಸ್ಟರ್ ಸೇರಿದಂತೆ ಯಾವುದೇ ಹಕ್ಕುಪತ್ರಗಳನ್ನು ನೀಡಿಲ್ಲ. ಅಧಿಕಾರಿಗಳ ಕಚೇರಿಗಳಿಗೆ ಹಲವು ಬಾರಿ ಓಡಾಡುತ್ತಿದ್ದೇವೆ. ಹಕ್ಕುಪತ್ರ ಪಡೆಯಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆದರೂ ಕಳೆದ ಮೂರು ವರ್ಷಗಳಿಂದ ಯಾವುದೇ ಸ್ಪಷ್ಟ ಉತ್ತರ ನೀಡದೇ ನಮ್ಮನ್ನು ಅಲೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಪ್ರತಿಭಟನೆ ನಡೆಸಿದ ನಂತರ ಅಧಿಕಾರಿಗಳು ಆರು ತಿಂಗಳೊಳಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಕೊಟ್ಟ ಅವಧಿಯಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಹಿಳಾ ಹೋರಾಟಗಾರ್ತಿ ಶಿವಮ್ಮ, ನಿವಾಸಿಗಳಾದ ಕವಿತಾ, ಸುಮ, ನಿಂಗಮ್ಮ, ರಾಧ, ಪುಟ್ಟನಂಜಮ್ಮ, ನಾಗವೇಣಿ, ದೀಪಾ, ಜಯಮ್ಮ ಹಾಗೂ ಮಹದೇವ, ನಿಂಗರಾಜು ಸೇರಿ ಹಲವು ಮಂದಿ ಭಾಗವಹಿಸಿದ್ದರು.