ಸಾರಾಂಶ
ಸಿಂಧನೂರಿನ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ ರಾಜ್ಯ ಘಟಕದಿಂದ ವಸತಿ ನಿಲಯಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಬಾಕಿ ವೇತನ ಪಾವತಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.
ಸಿಂಧನೂರು: ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ವಸತಿ ನಿಲಯಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ ರಾಜ್ಯ ಘಟಕದಿಂದ ನಗರದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.
ನಂತರ ರಾಜ್ಯ ಘಟಕದ ಅಧ್ಯಕ್ಷೆ ವಿಜಯರಾಣಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಿಂಧನೂರಿನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಎಲ್ಲ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ, ಹೊರಗುತ್ತಿಗೆ ಆಧಾರಿತ ಹಾಗೂ ದಿನಗೂಲಿ ನೌಕರರ ವೇತನವು 11 ತಿಂಗಳು ಕಳೆದರೂ ಪಾವತಿಸಿಲ್ಲ. ಇದರಿಂದ ಸಿಬ್ಬಂದಿ ಕುಟುಂಬ ನಿರ್ವಹಣೆ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಮೂಲಕ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಂಎಂಎಸ್ ಸಂಘಟನೆಯ ರಾಜ್ಯ ಗೌರವ ಸಲಹೆಗಾರರಾದ ಕರಿಯಪ್ಪ ತೋರಣದಿನ್ನಿ, ಗುರುಲಿಂಗಪ್ಪ ದೊಡ್ಡಮನೆ ತೋರಣದಿನ್ನಿ, ಡಿಎಸ್ಎಸ್ ಮುಖಂಡ ಪಂಪಾಪತಿ, ಹುಸೇನಪ್ಪ ಸಿಂಗಾಪುರ, ಹಂಚಿನಾಳ, ನಿರ್ಮಲ ಹಂಚಿನಾಳ, ಕಾರ್ಮಿಕರಾದ ಸುಶೀಲಮ್ಮ, ವಿರುಪಮ್ಮ, ಶಂಕರಮ್ಮ, ಅಣ್ಣಮ್ಮ ಇದ್ದರು.