ಟಿಎಲ್‌ಬಿಸಿ-76 ಉಪಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಧರಣಿ

| Published : Jan 08 2025, 12:15 AM IST

ಸಾರಾಂಶ

ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಆವರಣದಲ್ಲಿ ಧರಣಿ ನಿರತ ರೈತರೊಂದಿಗೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವಿಜಯಲಕ್ಷ್ಮಿ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಾನ್ವಿತುಂಗಭದ್ರಾ ಎಡದಂಡೆ ನಾಲೆಯ 76 ವಿತರಣಾ ಕಾಲುವೆ ವ್ಯಾಪ್ತಿಗೆ ಬರುವ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಹಿರೇಕೋಟ್ನೆಕಲ್ ಗ್ರಾಮದ ನಂ.4 ಕಾಲುವೆ ಉಪವಿಭಾಗದ ಕಚೇರಿಯ ಆವರಣದಲ್ಲಿ ಸೇರಿದ ರೈತರು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವಿಜಯಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವೈ.ಬಸವರಾಜ ನಾಯಕ, 76ರ ವಿತರಣಾ ಕಾಲುವೆಯ ಉಪಕಾಲುವೆ ವ್ಯಾಪ್ತಿಗೆ 35 ಗ್ರಾಮಗಳು ಸೇರಿದಂತೆ 31 ಕಿ.ಮೀ.ಗಳವರೆಗೆ ನೀರು ಹರಿಸುವುದಕ್ಕೆ ಹಿಂಗಾರು ಬೆಳೆಗಳಿಗೆ ಜ.1ರಿಂದ ನೀರು ಹರಿಸುವುದಾಗಿ ಐಸಿಸಿ ಸಭೆಯಲ್ಲಿ ನಿರ್ಣಯವಾಗಿದ್ದರೂ ಇದುವರೆಗೂ ಈ ಭಾಗದ ಕಾಲುವೆಗಳಿಗೆ ನೀರು ಬಿಡದೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ. ಈ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ನೀರಾವರಿ ಇಲಾಖೆ ಎಂಜಿನಿಯರ್ ವಿಜಯಲಕ್ಷ್ಮೀ, ಜಿಲ್ಲಾಧಿಕಾರಿ ಅದೇಶದಂತೆ ಎಲ್ಲಾ ಕಾಲುವೆಗಳಿಗೂ ಸಮರ್ಪಕವಾಗಿ ನೀರನ್ನು ಹರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಶಾಂತರಾಜ್ , ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಕಿರಿಯ ಅಭಿಯಂತರರಾದ ರಮೇಶ,ಲಕ್ಷ್ಮೀ,ಶಶಿರೇಖ, ರೈತ ಮುಖಂಡರಾದ ಶಿವರಾಜ್ ಉದ್ಬಾಳ್, ಹೊಳೆಯಪ್ಪ ಉಟಕನೂರು,ರವಿಸ್ವಾಮಿ,ನರಸರೆಡ್ಡೆಪ್ಪ, ಸಿದ್ದರಾಮೇಶ, ವೀರನಗೌಡ,ಅಚ್ಚಯತ್ತರಾಯ ,ಸತ್ಯನಾರಾಯಣ,ಉದ್ದಾನಪ್ಪಗೌಡ, ವಿಜಯಕುಮಾರ ಸೇರಿ ಅನೇಕರು ಇದ್ದರು.