ಸಾರಾಂಶ
ರಾಜ್ಯದ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕೌಶಲ್ಯದ ಹಿನ್ನೆಲೆಯಲ್ಲಿ ಕರಾಟೆ ತರಬೇತಿ ನೀಡಬೇಕು.
ಬಳ್ಳಾರಿ: ಈ ಹಿಂದೆ ಜಾರಿಯಲ್ಲಿದ್ದಂತೆ ರಾಜ್ಯದ ಸರ್ಕಾರಿ ಪ್ರೌಢಶಾಲೆ ಮತ್ತು ವಸತಿ ಶಾಲೆ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿ ಯೋಜನೆ ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕೌಶಲ್ಯದ ಹಿನ್ನೆಲೆಯಲ್ಲಿ ಕರಾಟೆ ತರಬೇತಿ ನೀಡಬೇಕು. ಇದರಿಂದ ದುಷ್ಕರ್ಮಿಗಳಿಂದ ಸ್ವಯಂರಕ್ಷಣೆ ಮಾಡಿಕೊಳ್ಳಲು ಮತ್ತು ದುಷ್ಟರನ್ನು ಮಟ್ಟ ಹಾಕಲು ಸಾಧ್ಯವಾಗಲಿದೆ ಎಂದರಿತು ಕೇಂದ್ರದ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ (ಆರ್‌ಎಂಎಸ್‌ಎ) ರಾಜ್ಯದ ಪ್ರೌಢಶಾಲೆ ಹಾಗೂ ಕೆಲ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ಮತ್ತಿತರ ಆತ್ಮರಕ್ಷಣೆಯ ಕಲೆಗಳ ತರಬೇತಿಯನ್ನು ಆರಂಭಿಸಲಾಯಿತು. ಬಳಿಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ಶಾಲೆಗಳಿಗೂ ವಿಸ್ತರಿಸಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರದಿಂದ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಗಳು ಮತ್ತಿತರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದವು. ಆದರೆ, ವಿನಾಕಾರಣ ರಾಜ್ಯ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಕರಾಟೆ ತರಬೇತಿ ನೀಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಕರಾಟೆ ತರಬೇತುದಾರರೂ ನಿರುದ್ಯೋಗಿಗಳಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಹಿಂದಿನಂತೆಯೇ ಬಾಲಕಿಯರಿಗೆ ಕರಾಟೆ ತರಬೇತಿ ನೀಡುವ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಆಗ್ರಹಿಸಿದರು.ಜಿಲ್ಲಾಡಳಿತ ಮೂಲಕ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಕಳುಹಿಸಿಕೊಡಲಾಯಿತು. ಸಂಘದ ಜಿಲ್ಲಾಧ್ಯಕ್ಷ ಡಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಜಡೇಶ್, ರಾಜ್ಯ ಕರಾಟೆ ತರಬೇತಿ ಶಿಕ್ಷಕರ ಸಂಘದ ಕಾರ್ಯದರ್ಶಿ ಕಟ್ಟೆಸ್ವಾಮಿ, ಮಲ್ಲಿಕಾರ್ಜುನ ಹಿರೇಮಠ, ರವಿಕುಮಾರ್, ಹುಲುಗಣ್ಣ, ಪ್ರಸಾದ್, ಗುರುನಾಥ್, ಸುನಿಲ್ ಹಾಗೂ ಸೈಯದ್ ಸೇರಿದಂತೆ ಸಂಘದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.