ಕಾಗಿನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಪ್ರತಿಭಟನೆ

| Published : Jul 15 2025, 01:00 AM IST

ಕಾಗಿನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎನ್. ನಾಯಕ್ ಮಾತನಾಡಿ, ರಾಜ್ಯದಲ್ಲಿ ಕಾಗಿನೆಲೆ ಗ್ರಾಮ ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಪ್ರವಾಸಿ ಕೇಂದ್ರವಾಗಿ ಈಗಾಗಲೇ ರಾಜ್ಯದ ಮನೆಮಾತಾಗಿರುವ ಕಾಗಿನೆಲೆ ಗ್ರಾಮದಲ್ಲಿ ಗುಣಮಟ್ಟದ ರಸ್ತೆಗಳಿಲ್ಲ ಎಂದರು.

ಬ್ಯಾಡಗಿ: ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿನ ಕನಕದಾಸ ವೃತ್ತದಿಂದ ಚನ್ನಕೇಶವ ದೇವಸ್ಥಾನದೆವರೆಗೆ ರಸ್ತೆ ಅಗಲೀಕರಣ ಹಾಗೂ ಗ್ರಾಮದಲ್ಲಿನ ಟಿಪ್ಪು ಸುಲ್ತಾನ್ ಸರ್ಕಲ್ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಹಾಗೂ ಆಮ್ ಆದ್ಮಿ ಪಾರ್ಟಿ ವತಿಯಿಂದ ಸೋಮವಾರ ನೂರಾರು ಜನರು ಬೃಹತ್ ಪ್ರತಿಭಟನೆ ನಡೆಸಿದರು.ಗ್ರಾಮದ ಕನಕದಾಸ ಸರ್ಕಲ್‌ದಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹೋರಾಟಗಾರರು ವಿನೂತನವಾಗಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎನ್. ನಾಯಕ್ ಅವರು, ರಾಜ್ಯದಲ್ಲಿ ಕಾಗಿನೆಲೆ ಗ್ರಾಮ ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಪ್ರವಾಸಿ ಕೇಂದ್ರವಾಗಿ ಈಗಾಗಲೇ ರಾಜ್ಯದ ಮನೆಮಾತಾಗಿರುವ ಕಾಗಿನೆಲೆ ಗ್ರಾಮದಲ್ಲಿ ಗುಣಮಟ್ಟದ ರಸ್ತೆಗಳಿಲ್ಲ. ಇದು ನಾಚಿಗೇಡಿನ ಸಂಗತಿ.

ಕನಕದಾಸ ಸರ್ಕಲ್‌ನಿಂದ ಚನ್ನಕೇಶ್ವರ ದೇವಸ್ಥಾನದವರೆಗೆ ಇರುವ ರಸ್ತೆ ಕಿಷ್ಕಿಂದೆಯಂತಾಗಿದ್ದು, ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ, ಪ್ರತಿದಿನ ರಸ್ತೆಯಲ್ಲಿ ವಾಹನ ಸವಾರರು ಪರದಾಡುತ್ತಲೇ ಸಾಗುವಂತಾಗಿದ್ದು, ರಸ್ತೆಯನ್ನು ಅಗಲೀಕರಣ ಮಾಡಿದಲ್ಲಿ ಸಂಚಾರ ಸುಗಮವಾಗಲಿದೆ ಎಂದರು.ಸಾಧಿಕ್ ಕಲ್ಲಾಪುರ ಮಾತನಾಡಿ, ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ಪ್ರವಾಸಿ ಮಂದಿರದ ಹಿಂದುಗಡೆ ಹಲವು ಹೊಸ ಮನೆಗಳು ನಿರ್ಮಾಣಗೊಂಡಿದ್ದು, ಇವುಗಳಿಗೆ ಇಲ್ಲಿಯವರೆಗೂ ಯಾವುದೇ ಮೂಲ ಸೌಕರ‍್ಯ ನೀಡಿಲ್ಲ. ಇದರಿಂದ ಇಲ್ಲಿ ಜನರು ಹೈರಾಣಾಗಿದ್ದು, ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಮೂಲ ಸೌಕರ‍್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.

ಈ ವೇಳೆ ಮುಖಂಡರಾದ ಸಾಧಿಕ್ ಕಲ್ಲಾಪುರ, ಮಾಲ್ತೇಶ ಕಟ್ಟಿಮನಿ, ಅಶೋಶ ವರ್ದಿ, ಮೊಲಾಲಿ ಮುಲ್ಲಾ, ಎಸ್. ಇಂಗಳಗುಂದಿ, ನ್ಯಾಯವಾದಿ ಅಲ್ಪಾಜ್ ಮತ್ತಿಹಳ್ಳಿ, ಮತ್ತು ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.