ಕೃಷಿ ಕೂಲಿ ಕಾರ್ಮಿಕರ ವೇತನ ವೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Feb 07 2024, 01:49 AM IST

ಸಾರಾಂಶ

ಈ ಬಾರಿ ಬಜೆಟ್‌ನಲ್ಲಿ ಕೃಷಿ ಕೂಲಿಕಾರರ ಕಲ್ಯಾಣ ನಿಧಿ ಸ್ಥಾಪಿಸಲು ಆಗ್ರಹಿಸಿ ರಾಜ್ಯ ಪ್ರಾಂತ ಕೃಷಿ ಕೂಲಿಕಾರ ಸಂಘದ ವತಿಯಿಂದ ಮನವಿ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಶಹಾಪುರ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬೆಲೆ ಏರಿಕೆಗೆ ತಕ್ಕಂತೆ ಇವರ ಕೂಲಿ ದರಗಳು ಹೆಚ್ಚಾಗುತ್ತಿಲ್ಲ. ಕೂಡಲೇ ಕೂಲಿಯನ್ನು ಹೆಚ್ಚು ಮಾಡಬೇಕು. ಈ ಬಾರಿ ಬಜೆಟ್‌ನಲ್ಲಿ ರಾಜ್ಯದ ಕೃಷಿ ಕೂಲಿಕಾರರ ಕಲ್ಯಾಣ ನಿಧಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ವತಿಯಿಂದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಚಿವರಿಗೆ ಮನವಿ ಸಲ್ಲಿಸಿದರು.

ನಗರದ ಹನುಮಾನ ಮಂದಿರದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಗೃಹ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ವೆಂಕಟ ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಮರ್ಪಕವಾಗಿ ಕೂಲಿ ಹೆಚ್ಚಳ ಹಾಗೂ ಆಹಾರ ಭದ್ರತೆ, ವಾಸದ ಮನೆ, ಮಕ್ಕಳಿಗೆ ಶಿಕ್ಷಣ, ಬಗರ್ ಹುಕುಂ ಸಾಗುವಳಿ ಸಕ್ರಮ, ಅರಣ್ಯ ಭೂಮಿ ಹಕ್ಕು, ಆರೋಗ್ಯ, ವೃದ್ಧಾಪ್ಯ ವೇತನ, ರೈತರ ಉಪ ಕಸುಬುಗಳಿಗೆ ಬ್ಯಾಂಕ್ ಸಾಲ ಕುರಿತು ಹಾಗೂ 55 ವರ್ಷ ದಾಟಿದ ಎಲ್ಲ ಕೃಷಿ ಕೂಲಿಕಾರರಿಗೆ ಮತ್ತು ಇತರ ಗ್ರಾಮೀಣ ಕೆಲಸಗಾರರಿಗೆ ತಿಂಗಳಿಗೆ 10,000 ರು. ನಿವೃತ್ತಿ ವೇತನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೃಷಿ ಕೂಲಿಕಾರರಿಗೆ ಕೃಷಿಯಲ್ಲಿ ಕೆಲಸದ ಲಭ್ಯತೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಯಾಂತ್ರೀಕರಣ, ಕಂಪನೀಕರಣ ತೀವ್ರಗೊಳ್ಳುತ್ತಿದ್ದು, ಗ್ರಾಮೀಣ ನಿರುದ್ಯೋಗ ಹೆಚ್ಚುತ್ತಿದೆ. ಕೃಷಿ ಕೂಲಿಕಾರರು ಹಳ್ಳಿಗಳನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗುತ್ತಿದೆ. ಇವರ ಹಿತಾಸಕ್ತಿ ಕಾಪಾಡಲು ಯಾವುದೇ ಕಾನೂನು ರೂಪಿಸಿಲ್ಲ. ಕೂಡಲೇ ಅವರ ಕಲ್ಯಾಣಕ್ಕಾಗಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ಸಂಘದ ತೆಲಂಗಾಣ ರಾಜ್ಯದ ಮುಖಂಡ ಗೋಪಾಲ್, ಸಂಘದ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನಡಾಫ, ರಾಜ್ಯ ಉಪಾಧ್ಯಕ್ಷ ಕರಿಯಪ್ಪ ಅಚ್ಚೋಳಿ ಮತ್ತು ಮಲ್ಲಮ್ಮ ಕೊಡ್ಲಿ ಮಾತನಾಡಿದರು.

ಎಸ್.ಎಂ. ಸಾಗರ, ರಂಗಮ್ಮ ಕಟ್ಟಿಮನಿ, ಶರಣಬಸವ ಜಂಬಲದಿನ್ನಿ, ಅಯ್ಯಪ್ಪ ಅನ್ಸೂರ್, ಸಿದ್ದಯ್ಯ ಬೀರ್ಗೊಂಡ, ಪ್ರಕಾಶ ಆಲ್ದಾಳ, ನಿಂಗಪ್ಪ ಕುರಕುಂದಿ, ಮಹಾದೇವಪ್ಪ, ಮಮ್ತಾಜ್ ಬೇಗಂ ಸೇರಿ ನೂರಾರು ಕೃಷಿ ಕೂಲಿಕಾರರು ಇದ್ದರು.

ಹೋರಾಟಕ್ಕೆ ಬೆಂಬಲ: ದರ್ಶನಾಪುರ

ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರು, ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಯೋಜನೆ ಜಾರಿ ಮಾಡುವ ಮೂಲಕ ರೈತರಿಗೆ ಕಾರ್ಮಿಕರಿಗೆ ಜನಸಾಮಾನ್ಯರಿಗೆ ಶಕ್ತಿ ತುಂಬಿದೆ. ಆದರೆ 9 ವರ್ಷದ ಬಿಜೆಪಿ ಸರಕಾರದ ಆಡಳಿತದಲ್ಲಿ ಈ ದೇಶದ ರೈತರ, ಕಾರ್ಮಿಕರ, ಕೃಷಿ ಕೂಲಿಕಾರರ ಪರವಾಗಿದ್ದ ಯೋಜನೆಗಳನ್ನು ಜಾರಿ ಮಾಡದೆ ಕಾರ್ಪೊರೇಟ್ ಕಂಪನಿಗಳ ಬಂಡವಾಳ ಶಾಹಿಗಳ ಪರವಾದ ಆಡಳಿತ ನಡೆಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಈ ದೇಶದ ಜನರು ಅದಕ್ಕೆ ತಕ್ಕ ಪಾಠ ಕಲಿಸಬೇಕು. ಕೇಂದ್ರದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವಾಗ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಬಿಜೆಪಿ ಸರಕಾರದ ಸಾಧನೆ ಏನು ಎಂದು ನೀವೆಲ್ಲರೂ ಪ್ರಶ್ನಿಸಬೇಕು ಎಂದರು.