ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅನಿಲ ಮೆಣಸಿನಕಾಯಿ, ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧದ ಹೋರಾಟವಲ್ಲ. ಗದಗ ಜನರ ಮೂಲಭೂತ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಎಂದರು.
ಗದಗ: ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ ಸೂಕ್ತ ಬರ ಪರಿಹಾರ ಒದಗಿಸುವುದು, ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಹಾಗೂ ಸ್ಥಳೀಯ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ಯುವ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಜೆನ್ ಜಿ ವೋಟರ್ಸ್ ಆ್ಯಂಡ್ ಸಿಟಿಜನ್ಸ್ ಫೋರಂ ವತಿಯಿಂದ ಬೃಹತ್ ಪಾದಯಾತ್ರೆ ಹಾಗೂ ರಸ್ತೆತಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಜರುಗಿತು. ಮುಳಗುಂದ ನಾಕಾ ಬಳಿ ಆಗಮಿಸಿದ ಪ್ರತಿಭಟನಾಕಾರರು ಬೃಹತ್ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೂ ಪ್ರತಿಭಟನೆ ಮುಂದುವರಿಸಿ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು.ಅನಿಲ ಮೆಣಸಿನಕಾಯಿ ಆಕ್ರೋಶ: ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅನಿಲ ಮೆಣಸಿನಕಾಯಿ, ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧದ ಹೋರಾಟವಲ್ಲ. ಗದಗ ಜನರ ಮೂಲಭೂತ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಜಿಲ್ಲಾದ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದರೂ ಆಡಳಿತ ವ್ಯವಸ್ಥೆ 6 ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಟ್ಟು ರೈತರಿಗೆ ಘೋರ ಅನ್ಯಾಯವೆಸಗಿದೆ. ಕುಡಿಯುವ ನೀರು ಮಾನವನ ಮೂಲಭೂತ ಹಕ್ಕು ಎಂದು ಭಾಷಣ ಬಿಗಿಯುವ ಪ್ರಭಾವಿ ನಾಯಕರ ತವರು ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ (30 ದಿನಕ್ಕೊಮ್ಮೆ) ನೀರು ಪೂರೈಸುವ ವಿಕೃತ ವ್ಯವಸ್ಥೆ ಇರುವುದು ನಾಚಿಕೆಗೇಡು. ಶಾಶ್ವತ ಕುಡಿಯುವ ನೀರಿನ ಬೃಹತ್ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದರು.
ಪದವಿ ಮುಗಿಸಿದ ಪ್ರತಿಭಾವಂತ ಯುವಕರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ಸಿಗುವಂತಾಗಬೇಕು. ಗ್ರಾಮೀಣ ಹಾಗೂ ನಗರ ಭಾಗಗಳಿಗೆ ಗುಣಮಟ್ಟದ ರಸ್ತೆ, ನಿತ್ಯ ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಯುವ ಮುಖಂಡ ವಸಂತ ಪಡಗದ, ರವಿಕಾಂತ ಅಂಗಡಿ, ಅಯ್ಯಪ್ಪ ಅಂಗಡಿ, ಮೋಹನ ವರವಿ, ವಿನೋದ ಮೊರಬದ, ಶಂಕರಗೌಡ ಜಾಯನಗೌಡ್ರ, ರಾಘವೇಂದ್ರ ಯಳವತ್ತಿ, ರವಿ ವಗ್ಗನವರ, ಕಿಶನ್ ಮೇರವಾಡೆ, ಸ್ವಾತಿ ಅಕ್ಕಿ, ಬಸನಗೌಡ ಪೊಲೀಸಪಾಟೀಲ, ರಜತ್ ಸೇರಿದಂತೆ ಅನೇಕರು ಇದ್ದರು. ಪಿಎಂ, ಸಿಎಂಗೆ ರವಾನೆ
ರಕ್ತದಲ್ಲಿ ಸಹಿ ಸಂಗ್ರಹಿಸುವ ವಿಶಿಷ್ಟ ಚಳವಳಿಯ ಮೂಲಕ ಗದಗ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಾಗೂ ನಗರದ ಎಲ್ಲ ಭಾಗಗಳಿಂದ ನಾಗರಿಕರು ಸ್ವಯಂಪ್ರೇರಿತರಾಗಿ ರಕ್ತದಲ್ಲಿ ಸಹಿ ಮಾಡುತ್ತಿದ್ದು, ಒಟ್ಟು 20 ಸಾವಿರ ರಕ್ತದ ಸಹಿ ಹೊಂದಿರುವ ಬೇಡಿಕೆಗಳ ಮನವಿ ಪತ್ರಗಳನ್ನು ಸಿಎಂ ಹಾಗೂ ಪಿಎಂ ಅವರಿಗೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೆನ್ ಜಿ ಹೋರಾಟಗಾರರು ತಿಳಿಸಿದರು.ವಿದ್ಯಾರ್ಥಿಗಳ ಆಕ್ರೋಶ...ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿದ್ಯಾರ್ಥಿಗಳ ವಿಡಿಯೋಗಳನ್ನು ಪೊಲೀಸ್ ಅಧಿಕಾರಿಗಳು ಪ್ರತ್ಯೇಕವಾಗಿಯೇ ಶೂಟಿಂಗ್ ಮಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಜೀಪ್ ಮುಂದೆ ಘೋಷಣೆ ಕೂಗಿದ ಘಟನೆ ನಡೆಯಿತು.
ಉಜ್ವಲ ಭವಿಷ್ಯ: ಕಳೆದ 50 ವರ್ಷಗಳಿಂದ ಜನರನ್ನು ನೀರಿಗಾಗಿ ಅಲೆದಾಡಿಸುತ್ತಿರುವುದು ಅಕ್ಷರಶಃ ಅಪರಾಧ. 30 ದಿನಕ್ಕೊಮ್ಮೆ ನೀರು ಕೊಟ್ಟು ನಗರವನ್ನು ಅಭಿವೃದ್ಧಿಪಡಿಸುತ್ತೇವೆ ಎನ್ನುವುದು ಕೇವಲ ಮರೀಚಿಕೆ. ನಮ್ಮ ಯುವಕರು ಊರು ಬಿಡಬಾರದು, ರೈತರು ಬೀದಿಗೆ ಬೀಳಬಾರದು. ನಾವು ಹೋರಾಟವನ್ನು ಅಧಿಕಾರದ ಆಸೆಯಿಂದ ಮಾಡುತ್ತಿಲ್ಲ, ಬದಲಿಗೆ ಗದುಗಿನ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ನಡೆಸುತ್ತಿದ್ದೇವೆ ಎಂದು ಜೆನ್ ಜಿ ಆಂದೋಲನದ ರೂವಾರಿ ಅನಿಲ ಮೆಣಸಿನಕಾಯಿ ತಿಳಿಸಿದರು.