ಬುದ್ಧವಿಹಾರದ ಆಡಳಿತವನ್ನು ಬೌದ್ಧರಿಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

| Published : Nov 27 2024, 01:00 AM IST

ಸಾರಾಂಶ

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಬಿಹಾರದ ಬೋಧ್ ಗಯಾದಲ್ಲಿರುವ ಬುದ್ಧ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾದ ಉಡುಪಿ ಘಟಕದ ವತಿಯಿಂದ ಮಂಗಳವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಭಾರತೀಯ ಬೌದ್ಧ ಮಹಾಸಭಾದ ಮುಂಜುನಾಥ ವಿ. ಮಾತನಾಡಿ, ಬೌದ್ಧ ಧರ್ಮವು ವಿದೇಶಿಯರ ದಾಳಿ ಹಾಗೂ ದೇಶದಲ್ಲಿರುವ ಇತರ ಧರ್ಮೀಯರ ದಾಳಿಯಿಂದ ದುರ್ಬಲವಾಯಿತು. ಸಮಾನತೆ, ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಈ ಧರ್ಮವನ್ನು ನಾಶಮಾಡಲು, ದುರ್ಬಲಗೊಳಿಸಲು ಹವಣಿಸಲಾಗಿತ್ತು, ಇಂದಿಗೂ ಈ ಪ್ರಯತ್ನ ಮುಂದುವರಿದಿದೆ. ಆದ್ದರಿಂದ ಭೋದ್‌ ಗಯಾದ ಬುದ್ಧ ವಿಹಾರದ ಆಡಳಿತವನ್ನು ಬೌದ್ಧ ಧರ್ಮೀಯರಿಗೆ ನೀಡಬೇಕು, ಈ ಮೂಲಕ ಬೌದ್ಧ ಧರ್ಮೀಯರಿಗೆ ಶಕ್ತಿ ತುಂಬಬೇಕು ಎಂದರು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್‌ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮಂಜುನಾಥ ಗಿಳಿಯಾರು ಮುಂತಾದವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಮೊದಲು ಜಿಲ್ಲಾಧಿಕಾರಿ ಕಚೇರಿ ಮುಂದೆ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.