ಪುರಸಭೆ ಎದುರು ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Dec 19 2023, 01:45 AM IST

ಪುರಸಭೆ ಎದುರು ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಪುರಸಭೆ ಎದುರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ತಾಲೂಕಾ ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಡಾ. ಅಂಬೇಡ್ಕರ್‌ ಅಭಿಮಾನಿ ಬಳಗ, ನಾನಾ ಸಂಘಟನೆಗಳಿಂದ ಆಕ್ರೋಶಮುಂಡರಗಿ: ಪಟ್ಟಣದ ಪುರಸಭೆ ಎದುರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ತಾಲೂಕು ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಚಾಲನೆ ನೀಡಿದ ಡಿಎಸ್‌ಎಸ್‌ ಮುಖಂಡ ಎಚ್‌.ಡಿ. ಪೂಜಾರ ಮಾತನಾಡಿ, ಬಹುತೇಕ ಜಿಲ್ಲಾ ಹಾಗೂ ತಾಲೂಕು ಸ್ಥಳಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿದ್ದನ್ನು ನಾವು ಎಲ್ಲೆಡೆ ಕಾಣುತ್ತೇವೆ. ಆದರೆ ಕಳೆದ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಸಹ ಇಲ್ಲಿನ ಪುರಸಭೆಯವರು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಪುತ್ಥಳಿ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದರು.2021ರ ಅಕ್ಟೋಬರ್ 22ರಂದು ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದ ಪಕ್ಕದಲ್ಲಿರುವ ಉದ್ಯಾನ ವನದಲ್ಲಿ ಪುತ್ಥಳಿ ನಿರ್ಮಾಣ ಮಾಡುವಂತೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ ಠರಾವು ಪಾಸು ಮಾಡಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಪಟ್ಟಣದಲ್ಲಿ ಇತರೆ ಪುತ್ಥಳಿಗಳನ್ನು ಸ್ಥಾಪಿಸಿದ್ದು, ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆನ್ನಿ ಹಚ್ಚುವ ಒಡೆದು ಆಳುವ ನೀತಿ ಸರಿಯಲ್ಲ. ತಕ್ಷಣವೇ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು. ಅಲ್ಲಿಯವರೆಗೆ ನಿರಂತರವಾಗಿ ಹೋರಾಟ ನಡೆಯಲಿದೆ ಎಂದರು. ಪುರಸಭೆ ಸದಸ್ಯ ಪವನ್ ಮೇಟಿ ಮಾತನಾಡಿ, ಈ ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗ ಅಪಾರವಾಗಿದೆ. ಇಂದು ದೇಶಾದ್ಯಂತ ಅಂಬೇಡ್ಕರ್ ಅವರ ಪುತ್ಥಳಿಗಳಿವೆ. ಆದರೆ ನಮ್ಮ ದುರ್ದೈವ ಎಂದರೆ ಮುಂಡರಗಿ ಪಟ್ಟಣದಲ್ಲಿ ಇದುವರೆಗೂ ಒಂದು ಬೃಹತ್ ಪುತ್ಥಳಿ ಇಲ್ಲದಿರುವುದು ಹಾಗೂ ಆ ಮಹಾನ್ ನಾಯಕರ ಪುತ್ಥಳಿ ನಿರ್ಮಾಣಕ್ಕಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ತಕ್ಷಣವೇ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದರು. ಚಿನ್ನಪ್ಪ ವಡ್ಡಟ್ಟಿ ಮಾತನಾಡಿ, ಮುಂಡರಗಿಯಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕಾಗಿ 20 ವರ್ಷದಿಂದಲೂ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ದೇಶಕ್ಕೆ ಸಂವಿಧಾನದಂತಹ ಮಹಾನ್ ಗ್ರಂಥವನ್ನು ನೀಡಿದಂತಹ ಮಹಾ ನಾಯಕನ ಪುತ್ಥಳಿಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದರು.

ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಧನಂಜಯ ಮಾಲಗತ್ತಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಡಿ.ಎಚ್.ನದಾಫ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಿಂಗರಾಜ ಹಾಲಿನವರ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಕುರಿತು ನಾವು ನಿರಂತರವಾಗಿ ಮನವಿ ಸಲ್ಲಿಸುತ್ತಾ ಒತ್ತಾಯಿಸುತ್ತಾ ಬಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಾವು ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರೆಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಾತನಾಡಿ, ತಾವು ನಿಮ್ಮ ಈ ಮನವಿಯ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇದಕ್ಕೆ ಸಂಬಂದಿಸಿದ ಎಲ್ಲ ಕಡತಗಳನ್ನು ಹಿರಿಯ ಅಧಿಕಾರಿಗಳಿಗೆ ಕಳಿಸಿರುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಧನಂಜಯ ಮಾಲಗತ್ತಿ ಮಾತನಾಡಿ, ಯಾವುದೇ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ಸರ್ಕಾರದ ನಿಯಮಗಳಿರುತ್ತವೆ. ಅದರಂತೆ ಮಾಡಬೇಕಾಗುತ್ತದೆ. ಮುಖ್ಯಾಧಿಕಾರಿಯವರು ಹೇಳುವಂತೆ ಇದೊಂದು ಬಾರಿ ಕಾಲಾವಕಾಶ ನೀಡುವಂತೆ ತಿಳಿಸಿದರು.ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಮಂಗಳವಾರ ಮಧ್ಯಾಹ್ನದವರೆಗೆ ನೀವು ಇದಕ್ಕೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಾವು ಮತ್ತೆ ಈ ಹೋರಾಟವನ್ನು ನಿರಂತರವಾಗಿ ಮುಂದುವರೆಸುವುದಾಗಿ ತಿಳಿಸಿ, ಮುಂಡರಗಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ನಿಂಗರಾಜ ಹಾಲಿನವರ, ಪ್ರಕಾಶ ಹಲವಾಗಲಿ, ಸಂತೋಷ ಹಿರೇಮನಿ, ಮಹ್ಮದರಫಿ ಮುಲ್ಲಾ, ಚಂದ್ರಶೇಖರ ಪೂಜಾರ, ಭೀಮರಾಜ ಮುಂಡವಾಡ, ಮಲ್ಲೇಶ ಕಕ್ಕೂರ, ಡಿ.ಎಂ.ಕಾತರಕಿ, ಹರೀಶ ಹಾರೊಗೆರಿ, ಮೌಲಾಸಾಬ್ ಬಾಗವಾನ, ಮಹಾದೇವಪ್ಪ ತಾಂಬ್ರಗುಂಡಿ, ಹನಂತ ಪೂಜಾರ, ಶಿವು ಕಲಕೇರಿ, ರೆಹೆಮಾನಸಾಬ್ ಒಂಟಿ, ಕಿರಣ್ ಹಾಲಿನವರ, ಬಸವರಾಜ ದೇಸಾಯಿ, ಮಂಜುನಾಥ ಬೆನಕೊಪ್ಪ, ನಾಗರಾಜ ಹಾನಗಲ್, ಪರಶುರಾಮ ಕರಡಿಕೊಳ್ಳ, ಅಂದಪ್ಪ ಉಳ್ಳಾಗಡ್ಡಿ, ನಿಂಗರಾಜ ಸ್ವಾಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.