ಬಿಸಿಯೂಟ ತಯಾರಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

| Published : Jan 13 2024, 01:31 AM IST

ಬಿಸಿಯೂಟ ತಯಾರಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₹3700 ಮತ್ತು ಸಹಾಯಕ ಅಡುಗೆಯವರಿಗೆ ₹3600 ಮಾತ್ರ ಇದೆ. ಮಧ್ಯಾಹ್ನ ಉಪಹಾರ ಯೋಜನೆಯಡಿ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿವೆ.

ಕೊಪ್ಪಳ: ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಸಮಿತಿಯಿಂದ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ 1.18 ಲಕ್ಷ ಬಿಸಿಯೂಟ ತಯಾರಕ ಮಹಿಳೆಯರು ಅಡುಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಅವರಿಗೆ ಇರುವ ವೇತನ, ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₹3700 ಮತ್ತು ಸಹಾಯಕ ಅಡುಗೆಯವರಿಗೆ ₹3600 ಮಾತ್ರ ಇದೆ. ಮಧ್ಯಾಹ್ನ ಉಪಹಾರ ಯೋಜನೆಯಡಿ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿವೆ.

ಈ ವರ್ಷದ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸಲು ಮುಂದೆ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಬಿಸಿಯೂಟ ತಯಾರಕರ ಮಹಿಳೆಯರ ಪರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

2023ರ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ತಿಂಗಳಿಗೆ ₹6000ಗೆ ಅವರ ವೇತನ ಹೆಚ್ಚಿಸಲಾಗುವುದು ಎಂದು ಮತ್ತು ಇದನ್ನು 6ನೇ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ ಎಂದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದರು. ಅವರು ನೀಡಿದ ಭರವಸೆಯಂತೆ ರಾಜ್ಯದ ಬರುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ಮಾಸಿಕ ₹6000 ವೇತನವನ್ನು ಹೆಚ್ಚಿಸಬೇಕು. ಬಿಸಿಯೂಟ ತಯಾರಕರ ಕೆಲಸವನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಸಿಯೂಟ ತಯಾರಕರು ರಾಜ್ಯದಲ್ಲಿ ಕಳೆದ 22 ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿದು ನಿವೃತ್ತರಾಗಿದ್ದಾರೆ. ಅದರಲ್ಲಿ ಈಗಾಗಲೇ ಸುಮಾರು 10 ಸಾವಿರ ಬಿಸಿಯೂಟ ತಯಾರಕರ ಮಹಿಳೆಯರು ರಾಜ್ಯಾದ್ಯಂತ ನಿವೃತ್ತಿ ಹೊಂದಿದ್ದಾರೆ. ಕಳೆದ ಮೂರು ವರ್ಷದಿಂದ ನಿವೃತ್ತಿ ಹೊಂದಿದವರು ಸೇರಿದಂತೆ ಮುಂದೆ ನಿವೃತ್ತಿಯಾಗುವ ಎಲ್ಲ ಬಿಸಿಯೂಟ ತಯಾರಕರಿಗೆ 60 ವರ್ಷ ವಯಸ್ಸಾಗಿ ನಿವೃತ್ತಿಯಾದವರಿಗೆ ಲಕ್ಷ ರೂಪಾಯಿ ಇಡುಗಂಟು ಹಣ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಳೆದ 22 ವರ್ಷಗಳಿಂದ ಶಾಲೆಗಳಲ್ಲಿ ಅಡುಗೆ ತಯಾರಿಸುವಾಗ ಆಕಸ್ಮಿಕವಾಗಿ ಕುಕ್ಕರ್ ಸ್ಫೋಟವಾಗಿ, ಸ್ಟೋವ್‌ನಿಂದ ಬೆಂಕಿ ಅನಾಹುತವಾಗಿ, ಬಿಸಿ ಸಾರು-ಗಂಜಿ ಮತ್ತಿತರ ಆಹಾರ ಪದಾರ್ಥಗಳು ಬಿಸಿಯೂಟ ತಯಾರಕ ಮಹಿಳೆಯರ ಮೈಮೇಲೆ ಬಿದ್ದು ಅನೇಕ ಮಹಿಳೆಯರು ಸಾವನ್ನಪ್ಪಿದ್ದಾರೆ. ಅವರ ಕುಟುಂಬದವರಿಗೆ ಇದುವರೆಗೂ ಸಂಘಟನೆಯಿಂದ ನಿರಂತರ ಬೇಡಿಕೆ ಇಟ್ಟರೂ ಸರ್ಕಾರ ಒಂದು ರುಪಾಯಿಯನ್ನೂ ಜಾರಿ ಮಾಡಿಲ್ಲ ಎಂದು ದೂರಿದರು. ಸರ್ಕಾರ ಸಂಘಟನೆಯ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಪುಷ್ಪಾ ಮೇಸ್ತ್ರಿ, ಉಪಾಧ್ಯಕ್ಷರಾದ ಸುಮಂಗಲಾ ಕೊತಬಾಳ, ವಿಮಲಾ ಆನಂದಹಳ್ಳಿ, ನಿರ್ಮಲಾ, ಬಸವಣ್ಣ, ಮುಖಬುಲ್ ರಾಯಚೂರು ಸೇರಿದಂತೆ ಇತರರು ಇದ್ದರು.