ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಪ್ರತಿಭಟನೆ

| Published : Mar 19 2024, 12:46 AM IST

ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರ ವಿತರಣೆ ಅಗತ್ಯ ಕ್ರಮ ಕೈಗೊಳ್ಳಿ. ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ರೈತ ಮುಖಂಡರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜೋಳ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಬರ ಪರಿಹಾರ ವಿತರಣೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ರೈತ ಮುಖಂಡರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ, ನಂತರ ಕೆಲವರು ಡಿಸಿ ಕಚೇರಿಗೆ ಹೋಗಿ ಅಧಿಕಾರಿ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಭೀಕರ ಬರಗಾಲ ಆವರಿಸಿದ್ದು, ರೈತರಿಗೆ ಪರಿಹಾರ ದೊರಕದೇ ಆತಂಕದಲ್ಲಿದ್ದಾರೆ, ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲಗೊಂಡಿರುವ ಸರ್ಕಾರ ಲೋಕಸಭೆ ಚುನಾವಣೆ ಸಿದ್ಧತೆಯ ಬಿಸಿಯಲ್ಲಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಕ್ತ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಕುಸಿತ ಕಂಡಿದೆ. ಇದರಿಂದ ಜೋಳ ಬೆಳೆದ ರೈತರು ಸಮಸ್ಯೆ ಎದುರಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಒಂದು ವಾರದೊಳಗಾಗಿ ಜೋಳ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಜೋಳ ಖರೀದಿ ಮಾಡಿ ರೈತರ ಖಾತೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಮಾನ್ವಿ, ಸಿಂಧನೂರಿನಲ್ಲಿ ಮುಂಗಾರು ಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಸಮರ್ಪಕವಾಗಿ ಖರೀದಿ ಮಾಡದೇ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹಿಂಗಾರು ಜೋಳ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು. ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದರೂ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳು ಸಾಲ ವಸೂಲಾತಿಗಾಗಿ ರೈತರನ್ನು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಎನ್‌ಆರ್‌ಇಜಿ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಕೂಡಲೇ ಸ್ಥಗಿತಗೊಳಿಸಲು ಸೂಚನೆ ನೀಡಬೇಕು, ರಾಜ್ಯ ಸರ್ಕಾರದ ನೀಡಿದ 2 ಸಾವಿರ ರೂಪಾಯಿಗಳು ಎಲ್ಲ ರೈತರಿಗೆ ಸರಿಯಾಗಿ ತಲುಪಿಲ್ಲ ಎಂದು ಆಪಾದಿಸಿದರು.

ತಕ್ಷಣ ರೈತರಿಗೆ ಬರ ಪರಿಹಾರ ಹಣ ಜಮಾ ಮಾಡಬೇಕು. ಜಿಲ್ಲೆಯ ಮಾನ್ವಿ, ಸಿರವಾರ, ದೇವದುರ್ಗ ತಾಲೂಕುಗಳಲ್ಲಿ ಫಸಲ್ ಭಿಮಾ ಯೋಜನೆಯಡಿ ಬಾರಿ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ತನಿಖೆ ನಡೆಸಿ, ನೈಜ ಫಲಾನುಭವಿಗಳಿಗೆ ಫಸಲ್ ಭಿಮಾ ವಿಮೆಯ ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು.

ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಭೂ ದಾಖಲೆಗಳ ಇಲಾಖೆಯಲ್ಲಿ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಟಿಪ್ಪಣಿ, ಲೆವನ್ ಇ ನಕ್ಷೆ ಪಡೆಯಲು ತೀವ್ರ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಜ್ಯ ಕಾರ್ಯದರ್ಶಿಗಳಾದ ಯಂಕಪ್ಪ ಕಾರಬಾರಿ, ಜಿಲ್ಲಾ ಉಪಾಧ್ಯಕ್ಷ ಬೂದೆಯ್ಯಸ್ವಾಮಿ, ಪದಾಧಿಕಾರಿಗಳಾದ ಮಲ್ಲಣ್ಣ ದಿನ್ನಿ, ದೇವರಾಜ ನಾಯಕ, ಹಾಜಿ ಮಸ್ತಾನ್, ಎಚ್.ಶಂಕರಪ್ಪ, ಮಲ್ಲಣ್ಣ ಗೌಡೂರು, ಶರಣಪ್ಪಗೌಡ, ಭ್ರಮಯ್ಯ ಆಚಾರಿ, ಬಸವರಾಜ ನವಲಕಲ್, ಶೇಖರಪ್ಪ ಜಾನೇಕಲ್, ದೇವೇಂದ್ರಪ್ಪ ನಾಯಕ, ಬಸವರಾಜ ತಡಕಲ್, ವೀರೇಶ ಗವಿಗಟ್ಟು, ಬಸವರಾಜ ಜಾನೇಕಲ್, ಪುತ್ರಪ್ಪ ನಾರಬಂಡಿ, ಉಮಾಪತಿ ಗೌಡ, ಎ.ಗೋವಿಂದಪ್ಪ ಸೇರಿ ಇತರರು ಇದ್ದರು.