ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕೋಲಿ ಸಮಾಜವನ್ನು ಗುರಿಯಾಗಿಸಿಕೊಂಡು ಕೆಲವು ಕಿಡಿಗೇಡಿಗಳು ಸಮಾಜದ ಮುಖಂಡರನ್ನು ಕೊಲೆ ಮಾಡುವ ಮೂಲಕ ಹೆದರಿಸುವ ತಂತ್ರ ರೂಪಿಸುತ್ತಿದ್ದಾರೆಂದು ಆರೋಪಿಸುತ್ತ ಕೋಲಿ, ಕಬ್ಬಲಿಗ ಸಮಾಜದವರು ಭಾರಿ ಸಂಖ್ಯೆಯಲ್ಲಿಂದು ಪ್ರತಿಭಟನೆ ನಡೆಸಿ ಗಮನ ಸಳೆದರು.ಕಲಬುರಗಿಯ ಜಗತ್ ವೃತ್ತದಿಂದ ಶುರುವಾದ ಪ್ರತಿಭಟನೆ ಇರಿ ಬಿಸಿಲಲ್ಲೇ ಸಾಗಿ ಡಿಸಿ ಕಚೇರಿಗೆ ತಲುಪಿತು. ಅಲ್ಲಿ ಪ್ರತಿಭಟನೆ ಬಹಿರಂಗ ಸಮಾವೇಶ ರೂಪಕ್ಕೆ ತಿರುಗಿತಲ್ಲದೆ ತಮ್ಮ ಸಮಾಜದ ಮೇಲಾಗುತತಿರುವ ಪ್ರಚೋದಿತ ದಾಳಿಗಳು, ಕಲೆ, ಅತ್ಯಾಚಾರದ ಪ್ರಕರಣಗಳಲ್ಲಿ ಉದಾಹರಿಸತ್ತ ಖಂಡಿಸಿದರು.
ಕೋಲಿ ಸಮಾಜದ ಉದಯೋನ್ಮುಖ ಯುವಕ ಗಿರೀಶ್ ಚಕ್ರ ಇವರನ್ನು ಇತ್ತೀಚೆಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೇಲ್ನೋಟಕ್ಕೆ ಕೆಲವು ಯುವಕರನ್ನು ಬಳಸಿಕೊಂಡು ಕೊಲೆ ಮಾಡಲಾಗಿದ್ದು,ಈ ಕೃತ್ಯದ ಹಿಂದೆ ಇರುವ ಕಾಣದ ಕೈಗಳ ಕೈವಾಡವಿದೆ. ಹೀಗಾಗಿ ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಕಾಣದ ಕೈಗಳನ್ನು ಬಯಲಿಗೆ ತಂದು ಕಾನೂನು ಕ್ರಮ ಜರುಗಿಸಬೇಕು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು.ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಕೋಳಿ ಸಮಾಜದ ಮೇಲೆ ಸರಣಿ ಕೊಲೆಗಳು, ದೌರ್ಜನ್ಯ, ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮತ್ತು ಪ್ರಚೋದಿತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದರಿಂದ ಸಮಾಜದ ಜನ ಭಯಭೀತರಾಗಿದ್ದಾರೆ.
ಕಳೆದ ಫೆಬ್ರುವರಿ 26ರಂದು ಚೌಡಾಪುರ ಗ್ರಾಪಂ ಮಾಜಿ ಅಧ್ಯಕ್ಷ ಸೈಬಣ್ಣಾ ಜಮಾದಾರ ಇವರಿಗೆ ದುಷ್ಕರ್ಮಿಗಳು ಹಿಂದಿ ಭಾಷೆಯಲ್ಲಿ ಮಾತನಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಚಿಂಚೋಳಿ ಗ್ರಾಮದಲ್ಲಿ ಶಿವಶರಣ ಜಮಾದಾರ ಕೊಲೆ ಮಾಡಲಾಗಿದೆ. ಜೇವರ್ಗಿ ತಾಲೂಕಿನ ಮಂದೇವಾಲದಲ್ಲಿ ವಿನಾಕಾರಣ ಪೊಲೀಸರು ಸೈಬಣ್ಣ ಕರಜಗಿ ಎಂಬ ಯುವಕನ ಕಣ್ಣಿಗೆ ಪಟ್ಟಿ ಕಟ್ಟಿ ಗುಂಡು ಹಾರಿಸಲಾಗಿದೆ.ನಾರಾಯಣ ಕಾಳೆ ಎಂಬ ದಲಿತ ಮುಖಂಡನನ್ನು ಲಾಕಪ್ ಡೆತ್ ಮಾಡಲಾಗಿದೆ. ಅದರಂತೆ ಕುಲಗುರ್ತಿಯ ದೇವಾನಂದ ಆತ್ಮಹತ್ಯೆ ಪ್ರಕರಣ ಕುರಿತು ನ್ಯಾಯ ಒದಗಿಸುವಂತೆ 45 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಇದಾದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಸಮಾಜದ ಸ್ವಾಮೀಜಿಗಳು ಕೂಡ ಈ ವಿಷಯದ ಬಗ್ಗೆ ಸಚಿವರ ಬಳಿ ಮಾತನಾಡಲು ಹೋದಾಗ ಸಮಯವು ಸಹ ನೀಡಿಲ್ಲ. ಜಿಲ್ಲೆಯಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತದ ದುರ್ಬಳಕೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣ ಜನ ಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದನ್ನು ಖಂಡಿಸಿ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂಬಿಗರ ಚೌಡಯ್ಯ ಗುರುಪೀಠದ ಮಾಜಿ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ, ಮಾತನಾಡುತ್ತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಿರಂತರವಾಗಿ ಕೋಲಿ ಸಮಾಜದ ಮುಖಂಡ ಕೊಲೆ ನಡೆಯುತ್ತಿರುವುದು ಸಮಾಜದ ಜನರಲ್ಲಿ ಆತಂಕ ಮೂಡಿಸಿದ್ದು ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳಿಂದ ಹಿಂದುಳಿದ ವರ್ಗದ ಜನ ಭಯಭೀತರಾಗಿ ಆತಂಕದ ಸ್ಥಿತಿಯಲ್ಲಿದ್ದಾರೆಂದರು.
ಕೋಲಿ ಸಮಾಜದ ಅಧ್ಯಕ್ಷ ಮಹಾರಾಯ ಅಗಸಿ, ಬಸವರಾಜ ಬೂದಾಹಾಳ್, ದೇವಿಂದ್ರ ಜಮಾದಾರ, ಶಿವಶರಣಗೌಡ ಪಾಟೀಲ್, ಬಲವಂತ ಜಕಬಾ, ಮಹಾಂತೇಶ ತಳವಾರ, ವಿಜಯಕುಮಾರ ಅರಳಗುಂಡಗಿ, ಬಾಬುರಾವ್ ಕಾಚಾಪುರ, ಯಲ್ಲಪ್ಪ ಶಿವಪುರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.