ಸಾರಾಂಶ
ಕೇಂದ್ರ ಸರ್ಕಾರದ ಬಜೆಟ್‌ನಲ್ಲೂ ರೈತರ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ರೈತನ ಬದುಕು ನಿಂತಿರುವುದೇ ಸಾಲದ ಮೇಲೆ. ಸಾಲ ಮಾಡದೇ ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಎಷ್ಟೇ ಖರ್ಚು ಮಾಡಿ ಕೃಷಿ ಮಾಡಿದರೂ ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ.
ಧಾರವಾಡ:
ಬಾಕಿ ಇರುವ ನರೇಗಾ ಕೂಲಿ ಹಣ ಬಿಡುಗಡೆ, ರೈತರ ಆತ್ಮಹತ್ಯೆ ತಡೆಗೆ ಸೂಕ್ತ ಕಾರ್ಯಕ್ರಮ ಜಾರಿ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್)ಯೂ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿತು. ಕಲಾಭವನದಿಂದ ಪ್ರಾರಂಭವಾದ ಮೆರವಣಿಗೆಯೂ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ದೀಪಾ ಮಾತನಾಡಿ, ಕೇಂದ್ರ ಸರ್ಕಾರದ ಬಜೆಟ್‌ನಲ್ಲೂ ರೈತರ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ರೈತನ ಬದುಕು ನಿಂತಿರುವುದೇ ಸಾಲದ ಮೇಲೆ. ಸಾಲ ಮಾಡದೇ ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಎಷ್ಟೇ ಖರ್ಚು ಮಾಡಿ ಕೃಷಿ ಮಾಡಿದರೂ ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸಾಮಾಜಿಕ ಉತ್ಪಾದನೆಯಲ್ಲಿ ತೊಡಗಿರುವ ರೈತರು ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸುಧಾರಿಸುವುದು ಸರ್ಕಾರದ ಮೂಲಭೂತ ಕರ್ತವ್ಯ ಎಂದರು.
ಕಳೆದ 15 ತಿಂಗಳಲ್ಲಿ 1185 ರೈತರ ಆತ್ಮಹತ್ಯೆ ರಾಜ್ಯದಲ್ಲಿ ದಾಖಲಾಗಿದೆ. ಧಾರವಾಡ ಜಿಲ್ಲೆಯೊಂದರಲ್ಲಿ 104ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ಸೂಕ್ತ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದು ಒತ್ತಾಯಸಿದ್ದರು.ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿ, ವಿದ್ಯುತ್ ಕಾಯ್ದೆಯು ರೈತರ ಮೇಲೆ ತೂಗುಗತ್ತಿಯಂತೆ ನಿಂತಿದೆ ಎಂದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ, ಜಂಟಿ ಕಾರ್ಯದರ್ಶಿ ಮಾರುತಿ ಪೂಜಾರ, ಜಗದೀಶ ಪೂಜಾರ, ಜಿಲ್ಲಾ ಸಮಿತಿ ಸದಸ್ಯರಾದ ಗಿರಿಯಪ್ಪ ಪೂಜಾರ, ಬಸಪ್ಪ ಕರಿಕಟ್ಟೆ, ಮಡಿವಾಳಪ್ಪ, ನಗೀನಾ, ಸಲೀಂ, ನಾಗಪ್ಪ, ಮಂಜಳಾ ಜಗದಾಳೆ ಮುಂತಾದವರು ಇದ್ದರು.