ಸಾರಾಂಶ
ಹುಬ್ಬಳ್ಳಿ: ದುಡಿಯುವ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕನಿಷ್ಟ ವೇತನ ಹೆಚ್ಚಿಸುವುದು, ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ರ್‍ಯಾಲಿ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು. ತಹಸೀಲ್ದಾರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ದುಡಿಯವ ವರ್ಗಕ್ಕೆ ಒಳ್ಳೆಯ ದಿನ ಕಲ್ಪಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರವು ಹಿಂದಿನ ಸರ್ಕಾರಗಳ ನೀತಿಗಳನ್ನೇ ಅನುಸರಿಸುತ್ತಿದೆ. ದುಡಿಯುವವರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಹೀಗಾಗಿ ಎಐಯುಟಿಯುಸಿ ದೇಶವ್ಯಾಪಿ ಪ್ರತಿಭಟನಾ ಸಪ್ತಾಹಕ್ಕೆ ಕರೆ ನೀಡಿದೆ ಎಂದರು.ಪ್ರಮುಖವಾಗಿ ದುಡಿಯುವ ವರ್ಗಕ್ಕೆ ಕಾಯಂ ಉದ್ಯೋಗ ಒದಗಿಸಬೇಕು. ಈ ಮೂಲಕ ಉದ್ಯೋಗ ಹಕ್ಕನ್ನು ಸಂವಿಧಾನದ ಮೂಲಭೂತ ಹಕ್ಕನ್ನಾಗಿಸಬೇಕು. ಕನಿಷ್ಟ ವೇತನವನ್ನು ₹28 ಸಾವಿರಗೆ ಹೆಚ್ಚಿಸುವ ಜತೆಗೆ ಬೆಲೆ ಏರಿಕೆ ನಿಯಂತ್ರಿಸಬೇಕು. ₹10 ಸಾವಿರ ಪಿಂಚಣಿ, ಇಎಸ್‌ಐ ಮತ್ತು ಪಿಎಫ್ ಒದಗಿಸಬೇಕು. ಅಲ್ಲದೇ, ಹೊಸ ಪಿಂಚಣಿ ಪದ್ಧತಿ ಹಿಂಪಡೆದು ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಎಲ್ಲ ಸೌಲಭ್ಯ ಒದಗಿಸುವ ಜತೆಗೆ ಎಐಯುಟಿಸಿ ಸಲ್ಲಿಸಿದ ಎಲ್ಲ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಭಾರತಿ ಶೆಟ್ಟರ್, ಮಂಜುಳಾ ಚಲವಾದಿ, ನೀಲಮ್ಮ ಸೊರಟೂರ, ಶೋಭಾ ಬೊಮ್ಮಣಗಿ, ಶೋಭಾ ದುರದುಂಡಿಮಠ, ಸುವರ್ಣಾ ಕುಕನೂರ, ರತ್ನಾ ತಳವಾರ, ಸವಿತಾ ಮಸೂತಿ, ಜರೀನಾ ನದಾಫ, ಚನ್ನಬಸವ್ವ ತಡಕೋಡಿ ಇತರರು ಇದ್ದರು.