ಉಪನೋಂದಣಾಧಿಕಾರಿ ಕಚೇರಿಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

| Published : Aug 30 2024, 01:03 AM IST

ಉಪನೋಂದಣಾಧಿಕಾರಿ ಕಚೇರಿಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿನಿತ್ಯ ತಮ್ಮ ಆಸ್ತಿ ನೋಂದಣಿ, ಮಾರಾಟ ಇನ್ನಿತರ ವಿಚಾರವಾಗಿ ನೂರಾರು ಸಂಖ್ಯೆಯ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಕುರ್ಚಿ, ಕುಡಿವ ನೀರು ಹಾಗೂ ಶೌಚಗೃಹದ ವ್ಯವಸಸ್ಥೆ ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸಲಾಗಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಅವ್ಯವಸ್ಥೆಯಿಂದ ಕೂಡಿರುವ ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಸಬ್ ರಿಜಿಸ್ಟರ್ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ನೋಂದಣಾಧಿಕಾರಿಗಳ ಕಚೇರಿ ಮೊದಲನೇ ಮಹಡಿಯಲ್ಲಿದ್ದು, ವೃದ್ಧರು, ಅಂಗವಿಕಲರು, ದೈಹಿಕ ನಿಶಕ್ತರು ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿನಿತ್ಯ ತಮ್ಮ ಆಸ್ತಿ ನೋಂದಣಿ, ಮಾರಾಟ ಇನ್ನಿತರ ವಿಚಾರವಾಗಿ ನೂರಾರು ಸಂಖ್ಯೆಯ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಕುರ್ಚಿ, ಕುಡಿವ ನೀರು ಹಾಗೂ ಶೌಚಗೃಹದ ವ್ಯವಸಸ್ಥೆ ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸಲಾಗಿಲ್ಲ ಎಂದು ಕಿಡಿಕಾರಿದರು.

ಅಧಿಕಾರಿಗಳಿಗೆ ಮಾತ್ರ ಶೌಚಗೃಹವಿದ್ದು, ಸಾರ್ವಜನಿಕರಿಗೆ ಇಲ್ಲವಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಬಹಿರ್ದೆಸೆಗೆ ಎಲ್ಲಿಗೆ ಹೋಗಬೇಕು. ಇದರಿಂದ ಮಹಿಳೆಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ ಎಂದು ಉಪನೋಂದಣಿಧಿಕಾರಿ ವಎಂಕಟೇಶ್ ಅವರನ್ನು ಪ್ರಶ್ನಿಸಿದರು.

ಬಿಜೆಪಿ ರೈತಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ಸಬ್‌ರಿಜಿಸ್ಟರ್ ಇಲಾಖೆಗೆ ಸೇರಿದ ಸ್ಥಳವಿದ್ದು, ಅಲ್ಲಿಗೆ ಕಚೇರಿ ಸ್ಥಳಾಂತರಿಸಬೇಕು. ಮೊದಲನೇ ಮಹಡಿಯಲ್ಲಿ ಕಚೇರಿಯಿಂದ ಸಾರ್ವಜನಿಕವಾಗಿ ತೊಂದರೆಯಾಗುತ್ತಿದೆ ಎಂದರು.

ಜನದಟ್ಟಣೆ ಹೆಚ್ಚಾಗಿರುವ ಕಾರಣ ಕಚೇರಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಸಿಗದೇ ಪರದಾಡುತ್ತಿದ್ದಾರೆ. ಈಗಿರುವ ಕಚೇರಿಗೆ ಬಾಡಿಗೆ ತೆರಬೇಕಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಇಲಾಖೆಗೆ ಸೇರಿದ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲಾ ವಿಚಾರಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಕ್ರಮವಹಿಸಿ. ಇಲ್ಲವಾದರೆ ಸೆ.5 ರಂದು ಹೆದ್ದಾರಿ ಸಂಚಾರ ತಡೆದು ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಉಪನೋಂದಣಾಧಿಕಾರಿ ವೆಂಕಟೇಶ್ ಮಾತನಾಡಿ, ಕಚೇರಿಯನ್ನು ನೆಲಮಹಡಿಗೆಗೆ ಸ್ಥಳಾಂತರಿಸುವಂತೆ ಕೋರಿ ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಮುಖೇನಾ ಮನವಿ ಸಲ್ಲಿಸಲಾಗಿದೆ. ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ದೊರೆಸ್ವಾಮಿ, ಕಡಬ ಪುಟ್ಟರಾಜು, ಹೊನ್ನಗಿರಿಗೌಡ, ಪದ್ದಣ್ಣ, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಎನ್.ಭಾಸ್ಕರ್, ಆನಂತ ಪದ್ಮನಾಭ, ಚಂದ್ರಶೇಖರ್ ಇತರರು ಇದ್ದರು.