ಸಾರಾಂಶ
ದೊಡ್ಡಬಳ್ಳಾಪುರ: ವಸತಿ ವಂಚಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ದಲಿತ ಹಾಗೂ ಪ್ರಗತಿಪರ ಒಕ್ಕೂಟದ ನೇತೃತ್ವದಲ್ಲಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಾಶೆಟ್ಟಿಹಳ್ಳಿ ಪಂಚಾಯಿತಿಯಲ್ಲಿ ವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಮಾಡಬೇಕು. ಖಾಸಗಿ ಒಡೆತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಂಚಾಯಿತಿ ಅಧೀನಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಬಡವರು ಮತ್ತು ದಲಿತರ ಆಸ್ತಿ ಮತ್ತು ನೀರಿನ ತೆರಿಗೆ ಕಡಿತಗೊಳಿಸಬೇಕು. ವರದನಹಳ್ಳಿ ಗ್ರಾಮದ ಕಸವನ್ನು ಈ ಕೂಡಲೇ ಸಂಸ್ಕರಣ ಘಟಕಕ್ಕೆ ವರ್ಗಾಯಿಸಬೇಕು. ಎಳ್ಳುಪುರ, ಬಾಶೆಟ್ಟಹಳ್ಳಿ ಮೀಸಲು ಉದ್ಯಾನ ಮತ್ತು ಬಯಲು ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಅರಹಳ್ಳಿ ಗುಡದಹಳ್ಳಿಯ 30 ಬಡ ಕುಟುಂಬ ಮತ್ತು ದಲಿತ ನಿರಾಶ್ರಿತರು ಅಕ್ರಮ- ಸಕ್ರಮ ಅರ್ಜಿ ಸಲ್ಲಿಸಿದರೂ ಹಕ್ಕು ಪತ್ರ ನೀಡದೇ ಉದ್ದೇಶ ಪೂರ್ವಕವಾಗಿ ವಜಾಗೊಳಿಸಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಅಕ್ರಮ ಖಾತೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುರಳಿ, ಬಿಸುವನಹಳ್ಳಿ ನಾರಾಯಣಸ್ವಾಮಿ, ಕಸುವನಹಳ್ಳಿ ರವಿಕುಮಾರ್, ಎಳ್ಳುಪುರ ಮಹೇಶ್, ಓಬದೇನಹಳ್ಳಿ ರಾಜು, ಮುನಿರಾಜು, ಪ್ರಜಾ ವಿಮೋಚನಾ ಚಳವಳಿ(ಸಮತಾವಾದ), ಜನಧ್ವನಿ ವೇದಿಕೆ, ಪ್ರಬುದ್ಧ ಕರ್ನಾಟಕ ಭೀಮಸೇನೆ, ಭೂಮಿ, ವಸತಿ ವಂಚಿತರ ಹೋರಾಟ ಸಮನ್ವಯ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.---------
18ಕೆಡಿಬಿಪಿ5-ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಂದೆ ದಲಿತರ, ಪ್ರಗತಿಪರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರಿಗೆ ಮನವಿ ಸಲ್ಲಿಸಿದರು.