ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಒಮ್ಮತದ ನಿರ್ಣಯ. ಹೀಗಾಗಿ ಪ್ರತ್ಯೇಕ ಪಾಲಿಕೆಯ ರಚನೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ವಿಪಕ್ಷದ ಜವಾಬ್ದಾರಿಯೂ ಹೌದು.
ಧಾರವಾಡ:
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆಯು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಿತು.ನೇತೃತ್ವ ವಹಿಸಿದ್ದ ಹೋರಾಟಗಾರ ಬಿ.ಡಿ. ಹಿರೇಮಠ ಮಾತನಾಡಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಒಮ್ಮತದ ನಿರ್ಣಯ. ಹೀಗಾಗಿ ಪ್ರತ್ಯೇಕ ಪಾಲಿಕೆಯ ರಚನೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ವಿಪಕ್ಷದ ಜವಾಬ್ದಾರಿಯೂ ಹೌದು. 1856ರಲ್ಲಿ ಧಾರವಾಡ ಮುನ್ಸಿಪಾಲಿಟಿಯನ್ನು 1962ರಲ್ಲಿ ಹುಬ್ಬಳ್ಳಿಯೊಂದಿಗೆ ಬಲವಂತವಾಗಿ ವೀಲಿನಗೊಳಿಸಿ, ಕಳೆದ 64 ವರ್ಷಗಳಿಂದ ಆಡಳಿತ ಹುಬ್ಬಳ್ಳಿ ಕೇಂದ್ರಿತವಾಗಿದೆ. ಜನತೆ ಸಣ್ಣ ಕೆಲಸಕ್ಕೂ ಹುಬ್ಬಳ್ಳಿಗೆ ಹೋಗಬೇಕಾಗಿದೆ ಎಂದು ತಿಳಿಸಿದರು.
ಪಾಲಿಕೆ ಬಜೆಟ್, ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಶೇ.70ರಷ್ಟು ಹುಬ್ಬಳ್ಳಿಗೆ ಹಾಗೂ ಶೇ.30ರಷ್ಟು ಮಾತ್ರ ಧಾರವಾಡಕ್ಕೆ ಬಳಸುವ ಮೂಲಕ ಅನ್ಯಾಯ ಮಾಡುತ್ತಿದೆ. ಸದ್ಯ ಪಾಲಿಕೆ ಸದಸ್ಯರ ಸದಸತ್ವಕ್ಕೆ ಧಕ್ಕೆ ಬರದಂತೆ ಪ್ರತ್ಯೇಕ ಪಾಲಿಕೆ ರಚನೆಗೆ ಒತ್ತಾಯಿಸಿದರು.15 ದಿನ ಗಡುವು:
ಹೊಸದಾಗಿ ಸರ್ಕಾರ ಆಡಳಿತಕ್ಕೆ ಬಂದಿದ್ದು, ಸಚಿವ ಸಂಪುಟ ಸಹ ಈಗತಾನೆ ರಚನೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಬೆಂಗಳೂರಿನಲ್ಲಿ ಆ. 21ರೊಳಗೆ ಸಭೆ ಕರೆದು, ಅಂತಿಮ ಅಧಿಸೂಚನೆ ಹೊರಡಿಸಲು ನಿರ್ಣಯ ಕೈಗೊಳ್ಳದಿದ್ದರೆ, ಆ. 22ರಿಂದ ಜನಾಂದೋಲನ ನಡೆಸುವುದಾಗಿಯೂ ಎಚ್ಚರಿಸಿದರು.ಮಹಾನಗರ ಪಾಲಿಕೆ ಸದಸ್ಯ ಶಿವು ಹಿರೇಮಠ ಮಾತನಾಡಿ, ರಾಜ್ಯಪಾಲರ ಒಪ್ಪಿಗೆ ನೀಡಿದ 24 ಗಂಟೆಯಲ್ಲಿ ಪ್ರತ್ಯೇಕ ಪಾಲಿಕೆ ಅಧಿಸೂಚನೆ ಹೊರಡಿಸುವ ವಾಗ್ದಾನ ಮಾಡಿದ ಕೈ ನಾಯಕರು ಮಾತಿಗೆ ತಪ್ಪಿದ್ದಾರೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರ ದಿನಗಳ ಗಡುವಿನೊಳಗೆ ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗೆ ಅಧಿಸೂಚನೆ ಹೊರಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಿನದ ೨೪ ಗಂಟೆ ಕಾಲ ಅಹೋರಾತ್ರಿ ಧರಣಿ ನಡೆಸುವುದಾಗಿಯೂ ಕೂಡ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೆಂಕಟೇಶ ಮಾಚಕನವರ, ವಿಠ್ಠಲ್ ಕಮ್ಮಾರ, ಶಿವಲಿಂಗಯ್ಯ ಹಿರೇಮಠ, ಗುರುರಾಜ ಹುಣಸಿಮರದ, ಮಹಾದೇವ ಹೊರಟ್ಟಿ, ದಾನಪ್ಪ ಕಬೇರ, ಮೋಹನ ರಾಮದುರ್ಗ, ಮನೋಜ ಕರಜಗಿ, ಈಶ್ವರ ಶಿವಳ್ಳಿ, ರವಿ ಮಾಳಿಗೆರ, ವಸಂತ ಅರ್ಕಾಚಾರಿ, ಎಸ್.ಎ. ದೇವಲಾಪುರ, ಕಾರ್ತಿಕ ನಾಯಕ, ಬಸವರಾಜ ಜಾಧವ, ಲಕ್ಷ್ಮಣ ಬಕ್ಕಾಯಿ ಅನೇಕರು ಇದ್ದರು.