ಸಾರಾಂಶ
ಕುಮಟಾ: ಇಲ್ಲಿನ ಕುಮಟಾ- ಶಿರಸಿ ರಾಜ್ಯ ಹೆದ್ದಾರಿಯ ಹೊಂಡಗುಂಡಿಗಳನ್ನು ಕೂಡಲೇ ದುರಸ್ತಿ ಮಾಡಬೇಕು ಹಾಗೂ ೬ ತಿಂಗಳಲ್ಲಿ ರಸ್ತೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಕರವೇ ಸ್ವಾಭಿಮಾನಿ ಬಣದ ಮುಂದಾಳತ್ವದಲ್ಲಿ ಸೋಮವಾರ ಅಳಕೋಡ ಪಂಚಾಯಿತಿಯ ಕತಗಾಲದಲ್ಲಿ ರಸ್ತೆತಡೆ ಮಾಡಿ ಪ್ರತಿಭಟಿಸಿದರು.
ಪ್ರತಿಭಟನೆ ವೇಳೆ ರಸ್ತೆಯ ಹೊಂಡಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವ ಹಾಗೂ ಬಾಳೆಗಿಡಗಳನ್ನು ನೆಟ್ಟು ವ್ಯವಸ್ಥೆಯ ವಿರುದ್ಧ ಅಣಕು ಪ್ರದರ್ಶಿಸಲಾಯಿತು. ಕೆಲಕಾಲ ರಸ್ತೆ ಸಂಚಾರ ತಡೆದು ನ್ಯಾಯಕ್ಕಾಗಿ ಪ್ರತಿಭಟನಾಕಾರರು ಮೊರೆ ಇಟ್ಟರು.ಭಾರತಮಾಲಾ ಯೋಜನೆ ಅಡಿಯಲ್ಲಿ ಶಿರಸಿ- ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಆರ್.ಎನ್. ಶೆಟ್ಟಿ ಕಂಪನಿ ೬ ವರ್ಷ ಕಳೆದರೂ ರಸ್ತೆ ಕಾಮಗಾರಿಯನ್ನು ಪೂರ್ತಿಗೊಳಿಸಿಲ್ಲ. ಅಲ್ಲಲ್ಲಿ ಅರೆಬರೆ ಕಾಮಗಾರಿಯನ್ನು ಮಾಡಲಾಗಿದ್ದು, ಮಳೆಯಿಂದಾಗಿ ಹೊಂಡಗುಂಡಿಗಳ ಬೃಹತ್ ಸಾಮ್ರಾಜ್ಯ ಸೃಷ್ಟಿಯಾಗಿದೆ. ಇದರಿಂದಾಗಿ ವಾಹನಿಗರು ಸಂಕಟ ಹೇಳತೀರದಾಗಿದೆ. ಕೂಡಲೇ ದುರಸ್ತಿ ಕಾರ್ಯ ಮಾಡಬೇಕು ಎಂದು ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಸಂದರ್ಭದಲ್ಲೇ ಇದೇ ಮಾರ್ಗವಾಗಿ ಹೊರಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ವಾಹನಕ್ಕೂ ಕೈ ಮಾಡಿ ನಿಲ್ಲಿಸಿದ ಪ್ರತಿಭಟನಾಕಾರರು, ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಶೀಘ್ರದಲ್ಲಿ ಕಾಮಗಾರಿಯನ್ನು ಮಾಡಲಾಗುವುದು ಎಂದು ಸಚಿವರು ಪ್ರತಿಭಟನಾಕಾರರಿಗೆ ಭರವಸೆ ನೀಡಿ ತೆರಳಿದರು.ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಮಾತನಾಡಿ, ಶಿರಸಿ- ಕುಮಟಾ ರಸ್ತೆಯಲ್ಲಿ ಹೊಂಡಗಳಿಂದಾಗಿ ವಾಹನ ಸಂಚಾರ ಸಮಸ್ಯೆಯಾದ ಹಿನ್ನೆಲೆಯಲ್ಲಿ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ನಿತ್ಯ ಸಂಚರಿಸುವ ವಾಹನ ಸವಾರಿಗೆ, ಶಾಲೆಯ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಹೊಂಡದಲ್ಲಿ ಬಿದ್ದು, ಅಪಘಾತಗಳಾಗಿದೆ. ಆ್ಯಂಬುಲೆನ್ಸ್‌ಗಳ ಓಡಾಟಕ್ಕೂ ತೊಂದರೆಯಾಗಿದೆ. ಆದ್ದರಿಂದ ಹೊಂಡಗಳನ್ನು ಸಮತಟ್ಟು ಮಾಡಿ, ಆರು ತಿಂಗಳೊಳಗೆ ನಿಗದಿತ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ವಕೀಲ ನಾಗರಾಜ ಹೆಗಡೆ ಮಾತನಾಡಿ, ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಜನಪ್ರತಿನಿಧಿಗಳು ತಮ್ಮ ಹವಾನಿಯಂತ್ರಿತ ಕಾರುಗಳಿಂದ ಇಳಿದು ಕುಮಟಾದಿಂದ ಶಿರಸಿಯವರೆಗೆ ಬೈಕ್‌ನಲ್ಲಿ ಸಂಚರಿಸಿದರೆ ಜನರು ಅನುಭವಿಸುತ್ತಿರುವ ಸಮಸ್ಯೆ ಮತ್ತು ಹೊಂಡ ತಪ್ಪಿಸಲು ಹೋಗಿ ಅಪಘಾತಗಳು ಹೇಗೆ ಸಂಭವಿಸುತ್ತದೆ ಎನ್ನುವ ಅರಿವಾಗುತ್ತದೆ ಎಂದರು.ಸ್ಥಳೀಯರಾದ ಅನಂತ ಶಾನಭಾಗ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾನಂದ ವೇರ್ಣೆಕರ, ಗ್ರಾಪಂ ಸದಸ್ಯರಾದ ನಳಿನಿ ನಾಯ್ಕ, ಕರವೇ ಕತಗಾಲ ಘಟಕಾಧ್ಯಕ್ಷ ಮಾರುತಿ ಆನೆಗುಂದಿ, ಮಹೇಂದ್ರ ನಾಯ್ಕ, ಹರೀಶ ಭಟ್, ಪ್ರದೀಪ ಶೆಟ್ಟಿ, ಅಣ್ಣಪ್ಪ ಮುಕ್ರಿ, ಅಂತೋನಿ ಲೋಪಿಸ್, ಹರೀಶಚಂದ್ರ ಮುಕ್ರಿ, ಮಾಸ್ತಿಗೌಡ, ನಾಗರಾಜ ನಾಯ್ಕ, ಈಶ್ವರ ಗೌಡ ಇತರರು ಇದ್ದರು.